ಕಾಶ್ಮೀರ ವಿಚಾರ: ಬಾಂಗ್ಲಾ ಸೇರಿ ಭಾರತದ ಬೆಂಬಲಕ್ಕೆ ನಿಂತ ದೇಶಗಳಿವು....
ಢಾಕಾ, ಆಗಸ್ಟ್ 21: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರದ ನಡೆಯನ್ನು 'ಆ ದೇಶದ ಆಂತರಿಕ ವಿಷಯ' ಎಂದಿರುವ ಬಾಂಗ್ಲಾದೇಶ, ಭಾರತದ ಬೆಂಬಲಕ್ಕೆ ನಿಂತಿದೆ. ಈ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ.
"ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಭಾರತದ ನಡೆ ಆ ದೇಶದ 'ಆಂತರಿಕ ವಿಷಯ'. ಆ ನಂತರ ಎದ್ದ ಉದ್ವಿಗ್ನತೆಯನ್ನು ಆ ಎರಡು ದೇಶಗಳು ಶಾಂತಿಯಿಂದ ಬಗೆಹರಿಸಿಕೊಳ್ಳಬೇಕು" ಎಂದು ಬಾಂಗ್ಲಾದೇಶ ಸಲಹೆ ನೀಡಿದೆ.
"ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯೇ ಎಲ್ಲಾ ದೇಶಗಳ ಗುರಿ. ಈ ಗುರಿಯನ್ನೇ ಆದ್ಯತೆಯನ್ನಾಗಿಸಿಕೊಂಡ ದೇಶಕ್ಕೆ ಬಾಂಗ್ಲಾ ಬೆಂಬಲ ನೀಡುತ್ತದೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ಅದು ತಿಳಿಸಿದೆ.

ಮತ್ತ್ಯಾವ ದೇಶಗಳ ಬೆಂಬಲ
ಬಾಂಗ್ಲಾ ಜೊತೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ತಮ್ಮ ಬೆಂಬಲ ಭಾರತಕ್ಕೆ ಎಂದು ಬಹಿರಂಗವಾಗಿಯೇ ಹೇಳಿವೆ. ಆದರೆ ಉಭಯ ದೇಶಗಳೂ ಉದ್ವಿಗ್ನತೆಯನ್ನು ಯುದ್ಧದ ಬದಲಾಗಿ ಶಾಂತಿಯಿಂದ ಬಗೆಹರಿಸಿಕೊಳ್ಳಬೇಕು ಎಂದು ಅವು ಸಲಹೆ ನೀಡಿವೆ. ಚೀನಾ ಹೊರತುಪಡಿಸಿದರೆ ಪಾಕಿಸ್ತಾನಕ್ಕೆ ಬಹಿರಂಗವಾಗಿ ಯಾವ ದೇಶವೂ ಬೆಂಬಲ ಸೂಚಿಸಿಲ್ಲ.

ಅಮೆರಿಕ ಅಧ್ಯಕ್ಷರ ಸಲಹೆ
ಕಾಶ್ಮೀರ ವಿಚಾರವನ್ನು ಉಭಯ ದೇಶಗಳೂ ಶಾಮತಿಯಿಂದ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಸಲಹೆ ನೀಡಿದ್ದು, ತಾವು ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದಾರೆ. ಎರಡನೆಯ ಬಾರಿಗೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಉತ್ಸುಕತೆಯನ್ನು ಅವರು ತೋರಿದ್ದಾರೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಈಗಾಗಲೇ ಟ್ರಂಪ್ ಮಾತುಕತೆ ನಡೆಸಿದ್ದಾರೆ.

ಐಸಿಜೆ ಮೊರೆ ಹೋದ ಪಾಕ್
ಈ ಎಲ್ಲವುಗಳ ನಡುವಲ್ಲೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲೂ ಮುಖಭಂಗ ಅನುಭವಿಸಿದ ಪಾಕಿಸ್ತಾನ ತಾನು, ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದಾಗಿ ಘೋಷಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಚ್ಚಿದ ಬಾಗಿಲ ಸಭೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಬಿಟ್ಟು ಇನ್ನ್ಯಾವ ದೇಶಗಳೂ ಬೆಂಬಲ ನೀಡಿರಲಿಲ್ಲ.

ಡೋಂಟ್ ಕೇರ್ ಎಂದ ಭಾರತ
ಐಸಿಜೆ ಮೊರೆ ಹೋಗುತ್ತೇನೆಂದು ಘೋಷಿಸಿದ ಪಾಕಿಸ್ತಾನಕ್ಕೆ ಸವಾಲಿನ ಧಾಟಿಯಲ್ಲಿ ಉತ್ತರಿಸಿರುವ ಭಾರತ, 'ಕುಲಭೂಷಣ್ ಪ್ರಕರಣದಲ್ಲಿ ಈಗಾಗಲೇ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಇದೀಗ ಮತ್ತೆ ಐಸಿಜೆ ಮೆಟ್ಟಿಲೇರಿದೆ. ಆದರೆ ವಿಶ್ವದ ಹೆಚ್ಚಿನ ದೇಶಗಳು ಭಾರತದ ಪರವಿದ್ದು, ಇಲ್ಲಿಯೂ ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ನಮಗಿದೆ. ಪಾಕಿಸ್ತಾನ ಯಾವುದೇ ಹಾದಿಯಲ್ಲಿ ಪ್ರತಿಕ್ರಿಯೆ ನೀಡಲು ಹೊರಟರೂ, ನಾವು ಅದರದೇ ಹಾದಿಯಲ್ಲಿ ಉತ್ತರಿಸುತ್ತೇವೆ" ಎಂದಿದೆ.












Click it and Unblock the Notifications