Wrestlers protest: ನ್ಯಾಯಕ್ಕಾಗಿ ಜಂತರ್ ಮಂತರ್‌ನ ಆಚೆ ಪ್ರತಿಭಟನೆ ನಡೆಸಲಿದ್ದಾರೆ ಕುಸ್ತಿಪಟುಗಳು
ನವದೆಹಲಿ, ಮೇ. 15: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯನ್ನು ದೆಹಲಿಯ ಜಂತರ್ ಮಂತರ್‌ನಿಂದ ಆಚೆಗೆ ಕೊಂಡೊಯ್ಯಲಾಗುವುದು ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಮೊದಲಿಗೆ, ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್‌ಗೆ ತೆರಳಲಿದ್ದು, ಅಲ್ಲಿನ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾಮನ್‌ವೆಲ್ತ್ ಮತ್ತು ಏಷ್ಯಾಡ್ ಚಿನ್ನದ ಪದಕ ವಿಜೇತರಾದ ವಿನೇಶ್ ಫೋಗಟ್ ಹೇಳಿದ್ದಾರೆ. "ನಾವು ನಮ್ಮ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಮಾತ್ರವಲ್ಲದೆ ಇತರ ಸ್ಥಳಗಳಿಗೂ ಹೋಗಿ ಪ್ರತಿಭಟನೆ ಮಾಡುತ್ತೇವೆ. ಏಕೆಂದರೆ ನಮ್ಮ ಈ ಪ್ರತಿಭಟನಾ ಸ್ಥಳ ಬಹುತೇಕ ಜೈಲಾಗಿ ಪರಿವರ್ತನೆಯಾಗುತ್ತಿದೆ ಎಂದು ನಮಗೆ ಅನ್ನಿಸುತ್ತಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮುಂದುವರೆದ ಅವರು, "ನಾವು ಜಂತರ್ ಮಂತರ್ ಬಿಟ್ಟು ಹೊರ ಹೋಗಿ, ನಾವು ಹೆಚ್ಚು ಜನರನ್ನು ತಲುಪಲು ಬಯಸುತ್ತೇವೆ. ಏಕೆಂದರೆ ಇದು ಮಹಿಳಾ ಕುಸ್ತಿಪಟುಗಳ ಬಗ್ಗೆ ಮಾತ್ರವಲ್ಲ. ಇದು ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳ ಬಗೆಗಿನ ಕೇಸ್. ಇಂದು, ನಾವು ಕನ್ನಾಟ್ ಪ್ಲೇಸ್‌ಗೆ ಹೋಗಿ, ನಾವು ಏಕೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಜನರಿಗೆ ಹೇಳುತ್ತೇವೆ" ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.
ಎಬಿಪಿ ನ್ಯೂಸ್ ವರದಿ ಪ್ರಕಾರ, ಕುಸ್ತಿಪಟುಗಳು ಸಂಜೆ 6 ಗಂಟೆಗೆ ಕನ್ನಾಟ್ ಪ್ಲೇಸ್ ತಲುಪಲಿದ್ದಾರೆ. ಅಲ್ಲದೆ, ಅವರು ಫೋನ್ ನಂಬರ್ ಬಿಡುಗಡೆ ಮಾಡಿದ್ದಾರೆ. ಇದರ ಮೂಲಕ ಕರೆ ಮಾಡಿ ನಾಗರಿಕರು ತಮ್ಮ ಚಳವಳಿಗೆ ಬೆಂಬಲವನ್ನು ವ್ಯಕ್ತಪಡಿಸಬಹುದು.
ಕುಸ್ತಿಪಟುಗಳು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ?
ಏಪ್ರಿಲ್ 23 ರಿಂದ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರ ನೇತೃತ್ವದಲ್ಲಿ ದೇಶದ ಪ್ರಮುಖ ಕುಸ್ತಿಪಟುಗಳು ದೆಹಲಿಯ ಗೊತ್ತುಪಡಿಸಿದ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರಾಗಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅಪ್ರಾಪ್ತ ವಯಸ್ಕರು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಾಕರಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಇದು ಅವರ ಪ್ರತಿಭಟನೆಯ ಎರಡನೇ ಸುತ್ತು. ಹೌದು, ಕುಸ್ತಿಪಟುಗಳ ಆರೋಪಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಿದ ನಂತರ ಜನವರಿಯಲ್ಲಿ ಮೊದಲ ಸುತ್ತಿನ ಪ್ರತಿಭಟನೆಯನ್ನು ರದ್ದುಗೊಳಿಸಲಾಯಿತು. ಆದರೆ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕುಸ್ತಿಪಟುಗಳು ಜಂತರ್ ಮಂತರ್‌ಗೆ ಹಿಂತಿರುಗಿ ಸರ್ಕಾರದ ನಿಷ್ಕ್ರಿಯತೆ ದೂಷಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸದ್ಯ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದರು. ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವವರೆಗೂ ನಾವು ಪ್ರತಿಭಟನೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications