ತಾಜ್ ಮಹಲ್ ಕೆಡಹುವುದಕ್ಕೆ ನನ್ನ ಬೆಂಬಲವಿದೆ: ಆಜಮ್ ಖಾನ್
ರಾಂಪುರ, ಜೂನ್ 29: 'ತಾಜ್ ಮಹಲ್ ಶಿವ ದೇವಾಲಯ. ಅದನ್ನು ಕೆಡಹುವುದಕ್ಕೆ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆಂಬಲ ನೀಡುತ್ತೇನೆ' ಎನ್ನುವ ಮೂಲಕ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
"ತಾಜ್ ಮಹಲ್ ಒಂದು ಶಿವ ದೇವಾಲಯ. ಯೋಗಿ ಆದಿತ್ಯನಾಥ್ ಮತ್ತು ಹಲವರು ಇದನ್ನು ನನಗೆ ಹೇಳಿದ್ದಾರೆ. ಈ ತಾಜ್ ಮಹಲ್ ಅನ್ನು ಕೆಡವಲು ನಾನು ನನ್ನೊಂದಿಗೆ 10 ರಿಂದ 20 ಸಾವಿರ ಮುಸ್ಲಿಮರನ್ನು ಕರೆತರುತ್ತೇನೆ" ಎಂದಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ 'ಕೆಂಪುಕೋಟೆ, ಸಂಸತ್ತು, ರಾಷ್ಟ್ರಪತಿ ಭವನಗಳಂತೆ ತಾಜ್ ಮಹಲ್ ಸಹ ಗುಲಾಮಗಿರಿಯ ಸಂಕೇತ' ಎನ್ನುವ ಮೂಲಕ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವ ತಾಜ್ ಮಹಲ್ ಶಿವ ದೇವಾಲಯವಾಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ ಎಂದು ಬಿಜೆಪಿ ಸಂಸದ ವಿನಾಯಕ್ ಕಟಿಯಾರ್ ಸಹ ಹೇಳಿದ್ದರು. ಹಲವು ಇತಿಹಾಸಜ್ಞರು ಸಹ ಇದೇ ಮಾತನ್ನು ಒತ್ತಿ ಹೇಳಿದ್ದಾರೆ. ತಾಜ್ ಮಹಲ್, ತೇಜೋ ಮಹಾಲಯ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿತ್ತು ಎಂಬ ಮಾಹಿತಿಯೂ ಕೆಲವೆಡೆ ಲಭ್ಯವಾಗಿದೆ.

ಇತ್ತೀಚೆಗಷ್ಟೇ ವಿಎಚ್ ಪಿಯ ಕೆಲವು ಸದಸ್ಯರು ತಾಜ್ ಮಹಲ್ ನ ದಕ್ಷಿಣ ದ್ವಾರವನ್ನು ಧ್ವಂಸ ಮಾಡಿದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications