Women's Reservation: ದೇಶದ ಮಹಿಳೆಯರಿಗೆ ಗೌರಿ ಹಬ್ಬಕ್ಕೆ ಉಡುಗೊರೆ?
ಗೌರಿ ಹಬ್ಬಕ್ಕೆ ತವರು ಮನೆಯಿಂದ ಬಾಗಿನ ಕೊಡುವುದು ವಾಡಿಕೆ, ಆದರೆ ಈ ಬಾರಿ ಗೌರಿ ಹಬ್ಬಕ್ಕೆ ಕೇಂದ್ರ ಸರ್ಕಾರ ಬಾಗಿನ ಲೆಕ್ಕದಲ್ಲಿ ದೊಡ್ಡ ಉಡುಗೊರೆ ಕೊಡಲು ರೆಡಿಯಾಗಿದೆ. ಆದ್ರೆ ಇದು ಒಂದು ವರ್ಷಕ್ಕೆ ಸೀಮಿತವಲ್ಲ, ಇಡೀ ಭಾರತದ ಇತಿಹಾಸದಲ್ಲೇ ನೆನಪಿರುವ ಉಡುಗೊರೆ ಆಗಿದೆ. ಹಾಗಾದ್ರೆ ಏನದು ಕೇಂದ್ರ ಸರ್ಕಾರ ಕೊಡುವ ಗಿಫ್ಟ್? ಗೌರಿ ಹಬ್ಬಕ್ಕೆ ಸಿಗುತ್ತಿರುವ ಸಿಹಿಸುದ್ದಿ ಏನು? ಶುಭಸುದ್ದಿ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಹೌದು, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮಹಿಳೆಯರ ಕೈ ಬಲಪಡಿಸುವ ಕೆಲಸವನ್ನು ಕಾಲ ಕಾಲಕ್ಕೆ ಸರ್ಕಾರ ಮಾಡುತ್ತಿದೆ. ಆದರೆ ಕಳೆದ ಎರಡೂವರೆ ದಶಕದಿಂದ ಆ ಒಂದೇ ಒಂದು ಕೆಲಸ ಆಗುತ್ತಿಲ್ಲ. ಅಕಸ್ಮಾತ್ ಅದೊಂದು ಯೋಜನೆ ಜಾರಿಗೆ ಬಂದರೆ ದೇಶದಲ್ಲಿನ ಕೋಟ್ಯಂತರ ಮಹಿಳೆಯರಿಗೆ ದೊಡ್ಡ ಬಲ ಸಿಕ್ಕಂತಾಗುತ್ತದೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರಿಗೆ ಸಾಕಷ್ಟು ಬಲ ನೀಡುವ ಮಸೂದೆಗೆ ಅಂತಿಮ ರೂಪ ನೀಡಲು ಮುಂದಾಗಿದೆ.

ಸೆಪ್ಟೆಂಬರ್ 20ಕ್ಕೆ ಮಹತ್ವದ ಘೋಷಣೆ?
ಇಷ್ಟೊತ್ತು ನಾವು ಹೇಳಿದ್ದು 'ಮಹಿಳಾ ಮೀಸಲಾತಿ' ಮಸೂದೆ ಬಗ್ಗೆ. ಮಹಿಳಾ ಸಂಸದರು ಲೋಕಸಭೆಯಲ್ಲಿ ಶೇ. 15ಕ್ಕಿಂತ ಕಡಿಮೆ ಸ್ಥಾನ ಹೊಂದಿದ್ದಾರೆ. ಅವರ ಪ್ರಾತಿನಿಧ್ಯವು ಅನೇಕ ರಾಜ್ಯಗಳ ವಿಧಾನಸಭೆಯಲ್ಲಿ ಶೇ. 10ಕ್ಕಿಂತ ಕಡಿಮೆ ಇದೆ. ಹೀಗಾಗಿ ಕಳೆದ 27 ವರ್ಷದಿಂದಲು ಮಹಿಳಾ ಮೀಸಲಾತಿ ಮಸೂದೆ ಜಾರಿಗಾಗಿ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಅದನ್ನು ಪೂರ್ಣಗೊಳಿಸಲು ಯಾವುದೇ ಸರ್ಕಾರದ ಕೈಯಲ್ಲಿ ಸಾಧ್ಯವೇ ಆಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಅಂದರೆ ಮೋದಿ ನೇತೃತ್ವದ ಸರ್ಕಾರ ಮಹಿಳೆಯರಿಗೆ ಬಲ ತುಂಬಲು ಸಜ್ಜಾಗಿದೆ.
ಭಾರತದ ಇತಿಹಾಸದಲ್ಲೇ ಹೊಸ ಮನ್ವಂತರ
ಅಷ್ಟಕ್ಕೂ ಲೋಕಸಭೆ & ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲು ಇಡುವ ಕ್ರಮಕ್ಕೆ ಸಾಕಷ್ಟು ಅಡ್ಡಿ ಆತಂಕ ಇದೆ. ಹೀಗಾಗಿ ರಾಜ್ಯಸಭೆ 2010ರಲ್ಲೇ 'ಮಹಿಳಾ ಮೀಸಲಾತಿ' ಮಸೂದೆ ಅಂಗೀಕರಿಸಿದ್ದರೂ ಲೋಕಸಭೆ ಈ ಮಸೂದೆಗೆ ಇನ್ನೂ ಅಂಗೀಕಾರ ನೀಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಒಟ್ಟಾಗಿ ಈ ಮಸೂದೆ ಬೆಂಬಲಿಸಿದ್ದರೂ ಪ್ರಯೋಜನವೇ ಆಗಿರಲಿಲ್ಲ. ಆದರೆ ಈ ಬಾರಿ ಅಂದರೆ ಸೆಪ್ಟೆಂಬರ್ 20ರಂದು 'ಮಹಿಳಾ ಮೀಸಲಾತಿ' ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುವ ನಿರೀಕ್ಷೆ ಇದೆ. ಈ ಮೂಲಕ ಲೋಕಸಭೆಯ ವಿಶೇಷ ಅಧಿವೇಶನ ಹೊಸ ಇತಿಹಾಸವನ್ನೇ ಸೃಷ್ಟಿಸಲು ಸಜ್ಜಾಗಿದೆ.

ವಿಧಾನಸಭೆಯಲ್ಲಿ ಮಹಿಳೆಯರ ಪ್ರಮಾಣ
ಈಗಿನ ಲೆಕ್ಕಾಚಾರ ಹೇಳುವುದಾದ್ರೆ ಪ್ರಸಕ್ತ ಲೋಕಸಭೆಯಲ್ಲಿ ಕೇವಲ 78 ಮಹಿಳಾ ಸದಸ್ಯರು ಇದ್ದಾರೆ. ಹೀಗಾಗಿ ಒಟ್ಟಾರೆ ಸದಸ್ಯರಲ್ಲಿ ಇದು ಶೇ. 15ಕ್ಕಿಂತ ಕಡಿಮೆ. ರಾಜ್ಯಸಭೆ ಮಹಿಳಾ ಪ್ರಾತಿನಿಧ್ಯ ಶೇಕಡಾ 14ರಷ್ಟಿದೆ ಎಂದು ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು. ಇದಕ್ಕಿಂತ ಬೇಸರದ ಸಂಗತಿ ಎಂದರೆ ಹಲವು ರಾಜ್ಯಗಳ ವಿಧಾನಸಭೆಗಳು ಶೇ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ.
ದೇಶದಲ್ಲಿ ಹಲವು ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶವೂ ಸೇರಿದಂತೆ ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಪುದುಚೇರಿ ರಾಜ್ಯಗಳು ಈ ಪಟ್ಟಿಗೆ ಸೇರಿವೆ. ಅಂದ್ರೆ ಈ ರಾಜ್ಯಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಇದೆ.

ಯಾವ ರಾಜ್ಯದಲ್ಲಿ ಹೆಚ್ಚು ಪ್ರಮಾಣ?
ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿಗೆ ಶೇ 10-12 ರಷ್ಟು ಮಹಿಳಾ ಶಾಸಕರಿದ್ದು. ಛತ್ತೀಸ್‌ಗಢ, ಪಶ್ಚಿಮ ಬಂಗಾಳ & ಜಾರ್ಖಂಡ್‌ಗಳು ಕ್ರಮವಾಗಿ ಶೇ.14.44, ಶೇ.13.7 ಮತ್ತು ಶೇ.12.35 ಮಹಿಳಾ ಶಾಸಕರೊಂದಿಗೆ ಅಗ್ರಸ್ಥಾನವ ಪಡೆದಿವೆ. ಹೀಗಾಗಿ ಇದೀಗ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ಬಂದರೆ ಭಾರತದ ಇತಿಹಾಸದಲ್ಲೇ ಹೊಸ ಮನ್ವಂತರ ಶುರುವಾಗುತ್ತೆ.
ಮಹಿಳೆಯರು ವಿಧಾನಸಭೆ, ಸಂಸತ್‌ಗೆ ಆಯ್ಕೆಯಾಗಲು ದಾರಿ ಸುಲಭವಾಗಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೆಪ್ಟೆಂಬರ್ 20ರಂದು 'ಮಹಿಳಾ ಮೀಸಲಾತಿ' ಮಸೂದೆ ಮಂಡಿಸಲಿದೆ ಎನ್ನಲಾಗಿದೆ. ಈ ಮಸೂದೆ ಲೋಕಸಭೆಗೆ ಎಂಟ್ರಿ ಕೊಟ್ಟರೆ ಸಾಕು ಸುಲಭವಾಗಿ ಪಾಸ್ ಆಗುವ ನಿರೀಕ್ಷೆ ದಟ್ಟವಾಗಿದೆ. ಈ ಮೂಲಕ ಮುಂದೆ ಭಾರತದ ಚುನಾವಣೆಗಳಲ್ಲೂ ದೊಡ್ಡ ಕ್ರಾಂತಿ ನಡೆಯುವುದು ಗ್ಯಾರಂಟಿ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕ್ರಾಂತಿ?
'ಮಹಿಳಾ ಮೀಸಲಾತಿ' ಮಸೂದೆ ಈಗ ನಡೆಯುತ್ತಿರುವ ಸಂಸತ್ ವಿಶೇಷ ಅಧಿವೇಶನದಲ್ಲೇ ಪಾಸ್ ಆದರೆ, ಮುಂಬರುವ ಲೋಕಸಭೆ ಚುನಾವಣೆಗೆ ಮೊದಲೇ ಕ್ರಾಂತಿ ಶುರುವಾಗಲಿದೆ. ಹೇಗೆಂದರೆ ಈಗಲೇ 'ಮಹಿಳಾ ಮೀಸಲಾತಿ' ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿ, ಜಾರಿಗೆ ಬಂದರೆ ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲೇ ಮೀಸಲಾತಿ ಸಿಗುತ್ತದೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಅತಿಹೆಚ್ಚಿನ ಅವಕಾಶ ಸಿಗಲಿದೆ. ಹೀಗಾಗಿ ಲೋಕಸಭೆ ವಿಶೇಷ ಅಧಿವೇಶನ ಸಾಕಷ್ಟು ಗಮನ ಸೆಳೆದಿದೆ.












Click it and Unblock the Notifications