ವರದಕ್ಷಿಣೆ ಹಣ ಕೊಡದ ಮಹಿಳೆ, ಶೌಚಾಲಯದಲ್ಲಿ ಸೆರೆ
ಪಾಟ್ನಾ, ಸೆ. 10 : ವರದಕ್ಷಿಣೆ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಪತಿ ತನ್ನ ಕುಟುಂಬದವರೊಂದಿಗೆ ಸೇರಿ ಆಕೆಯನ್ನು ಮೂರು ವರ್ಷಗಳಿಂದ ಶೌಚಾಲಯದಲ್ಲಿ ಕೂಡಿ ಹಾಕಿದ್ದ ಅಮಾನವೀಯ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಹಾರದ ದರ್ಬಾಂಗ್ ಜಿಲ್ಲೆಯ ರಾಮ್‌ಭಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಪತಿರಾಯ ಮತ್ತು ಆತನ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶೌಚಾಲಯದಲ್ಲಿ ಬಂಧಿಯಾಗಿದ್ದ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಕೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಶೌಚಾಲಯದಲ್ಲಿ ಪತ್ನಿಯನ್ನು ಕೂಡಿಹಾಕಿದ್ದ ಪ್ರಭಾತ್ ಕುಮಾರ್ ಸಿಂಗ್, ಆಕೆಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ ಮತ್ತು ಮಗುವನ್ನು ನೋಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವರ್ಷಗಳಿಂದ ಚಿಕ್ಕ ಕೋಣೆಯಲ್ಲಿದ್ದ ಆಕೆ ಸೂರ್ಯನ ಬೆಳಕು ನೋಡಲು ಸಹ ಕಷ್ಟಪಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. [ವರದಕ್ಷಿಣೆಯ ದಳ್ಳುರಿಗೆ ಮಗು ಆಹುತಿ, ಪತ್ನಿ ಗಂಭೀರ]
ಹೆಣ್ಣು ಮಗು ಹೆತ್ತದ್ದು ತಪ್ಪಾಯಿತು : 2010ರಲ್ಲಿ ಪ್ರಭಾತ್ ಕುಮಾರ್ ಸಿಂಗ್ ವಿವಾಹ ನಡೆದಿತ್ತು, ನಂತರ ಈ ದಂಪತಿಗೆ ಒಂದು ಹೆಣ್ಣು ಮುಗುವಾಯಿತು. ಅಂದಿನಿಂದ ಸಿಂಗ್ ಮತ್ತು ಆತನ ಕುಟುಂಬದವರು ಮಹಿಳೆಯನ್ನು ವರದಕ್ಷಿಣೆ ಹಣಕ್ಕಾಗಿ ಪೀಡಿಸಲು ಆರಂಭಿಸಿದರು. ಹಣ ತರಲು ಆಕೆ ನಿರಾಕರಿಸಿದಾಗ ಶೌಚಾಲಯದಲ್ಲಿ ಕೂಡಿಹಾಕಿ, ಸರಿಯಾಗಿ ಆಹಾರ ಕೊಡದೆ ಹಿಂಸೆ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. [ವರದಕ್ಷಿಣೆ ಕಿರುಕುಳ: ಪತಿಗೆ 10 ವರ್ಷ ಜೈಲು]
ಪ್ರಭಾತ್ ಕುಮಾರ್ ಸಿಂಗ್ ಮನೆಗೆ ಭೇಟಿ ನೀಡಿದ್ದ ಸ್ಥಳೀಯ ಮಹಿಳೆಯೊಬ್ಬರು ಸಿಂಗ್ ಪತ್ನಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿರುವ ವಿಷಯವನ್ನು ಬಹಿರಂಗಪಡಿಸಿದ್ದಳು. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಾನುವಾರ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಲಾಯಿತು ಎಂದು ಪೊಲೀಸರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications