ಶರದ್ ಪವಾರ್, ಸಂಜಯ್ ರಾವುತ್‌ರನ್ನು ಕೊಲ್ಲುತ್ತೇವೆ: ಕೋಮುಗಲಭೆ ನಡುವೆಯೇ ಮಹಾರಾಷ್ಟ್ರದ ನಾಯಕರಿಗೆ ಜೀವ ಬೆದರಿಕೆ
ಮುಂಬೈ, ಜೂನ್ 09: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ( ಎನ್‌ಸಿಪಿ ) ಅಧ್ಯಕ್ಷ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯ ವಕ್ತಾರ ಸಂಜಯ್ ರಾವತ್ ಅವರಿಗೆ ಶುಕ್ರವಾರ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಬಂದಿದೆ. ಡಾ ನರೇಂದ್ರ ದಾಭೋಲ್ಕರ್ ( ಆಗಸ್ಟ್ 2013 ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ವಿಚಾರವಾದಿ ) ಅವರಂತೆಯೇ ಕೊಲ್ಲುವುದಾಗಿ ಪವಾರ್ ಅವರಿಗೆ ಟ್ವಿಟರ್ ಸಂದೇಶದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಮಹರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಎನ್‌ಸಿಪಿ ಸಂಸದೆ, ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಶರದ್ ಪವಾರ್‌ಗೆ ವಾಟ್ಸಾಪ್‌ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಬೆಳವಣಿಗೆಗಳನ್ನು ಕೆಳಮಟ್ಟದ ರಾಜಕೀಯ ಎಂದು ಕರೆದಿರುವ ಸುಪ್ರಿಯಾ ಸುಳೆ, ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಉದ್ಧವ್ ಠಾಕ್ರೆ ಬಣದ ಶಾಸಕ ಸುನಿಲ್ ರಾವುತ್ ಅವರು ತಮ್ಮ ಸಹೋದರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರಿಗೂ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಿದ್ದಾರೆ.
ಒಂದು ತಿಂಗಳೊಳಗೆ ತಮ್ಮ ಸಾರ್ವಜನಿಕ ಭಾಷಣಗಳನ್ನು ನಿಲ್ಲಿಸಲು ರಾವುತ್‌ಗೆ ಟಾರ್ಗೆಟ್ ನೀಡಲಾಗಿದೆ. ಅದು ವಿಫಲವಾದರೆ ಗುಂಡುಗಳಿಂದ ಪ್ರಾಣ ತೆಗೆಯಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಘಟನೆಯ ಬಗ್ಗೆ ಮುಂಬೈ ಪೊಲೀಸ್ ಕಮಿಷನರ್ ಮತ್ತು ರಾಜ್ಯ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಶಾಸಕ ಸುನಿಲ್ ರಾವುತ್ ತಿಳಿಸಿದ್ದಾರೆ.

ಶರದ್ ಪವಾರ್ ಮತ್ತು ಸಂಜಯ್ ರಾವತ್ ಇಬ್ಬರೂ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ (ಯುಬಿಟಿ) ಎಂವಿಎ ಮೈತ್ರಿಕೂಟಕ್ಕೆ ಬುನಾದಿ ಹಾಕಿದವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಉದ್ದವ್ ಠಾಕ್ರೆ ನೇತೃತ್ವದಲ್ಲಿ ಎಂವಿಎ ಸರ್ಕಾರವು ಮಹಾರಾಷ್ಟ್ರವನ್ನು 30 ತಿಂಗಳುಗಳ ಕಾಲ ಆಳಿತು.
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ ಮಾತನಾಡಿ, ಪವಾರ್‌ಗೆ ಬೆದರಿಕೆ ಹಾಕಿರುವುದು ಕಳವಳಕಾರಿ ವಿಷಯವಾಗಿದ್ದು, ಪೊಲೀಸರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಶರದ್ ಪವಾರ್ ಅವರನ್ನು 'ಔರಂಗಜೇಬ್‌ನ ಪುನರ್ಜನ್ಮ' ಎಂದು ಭಾರತೀಯ ಜನತಾ ಪಕ್ಷದ ನಾಯಕ ನೀಲೇಶ್ ರಾಣೆ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‌ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಗುರುವಾರ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅವರ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಎನ್‌ಸಿಪಿ ವಕ್ತಾರ ಮಹೇಶ್ ತಾಪಸೆ ಅವರು ರಾಣೆ ಟ್ವೀಟ್ ಅನ್ನು 24 ಗಂಟೆಗಳಲ್ಲಿ ಅಳಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಮಹಾರಾಷ್ಟ್ರದ ಕೊಲ್ಹಾಪುರ ಹಿಂಸಾಚಾರದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ವಿರುದ್ಧ ಕೊಲ್ಲಾಪುರದಲ್ಲಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಶಿವಾಜಿ ಚೌಕ್‌ನಲ್ಲಿ ಹಿಂದೂ ಸಂಘಟನೆಗಳು ನಡೆಸಿದ ರ್ಯಾಲಿಯು ಘರ್ಷಣೆಗೆ ತಿರುಗಿದೆ. ರ್ಯಾಲಿಯ ಮುಕ್ತಾಯದ ನಂತರ, ಕೆಲವು ಕಿಡಿಗೇಡಿಗಳು ಮುಸ್ಲಿಂ ಸಮುದಾಯದ ಒಡೆತನದ ಮನೆಗಳು ಮತ್ತು ವ್ಯಾಪಾರ ಕೇಂದ್ರಗಳ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿದರು. ಆ ನಂತರ ಹಿಂಸಾಚಾರ ನಡೆದಿದೆ.












Click it and Unblock the Notifications