ಧೂಳು ತುಂಬಿದ ನರಕದಂತೆ ಕಾಣುತ್ತಿದೆ ರಾಷ್ಟ್ರ ರಾಜಧಾನಿ!
ದೆಹಲಿ: ಮನುಷ್ಯ ತಾನು ಮಾಡಿದ ತಪ್ಪಿಗೆ ಅನುಭವಿಸುತ್ತಿದ್ದಾನೆ. ಪ್ರಾಕೃತಿಕ ವಿಕೋಪಗಳ ದಾಳಿಗೆ ಮನುಷ್ಯರ ಸಂತತಿ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಸ್ಥಿತಿ ಕಂಡರೆ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ. ಯಾಕೆ ಅಂದ್ರಾ? ಅಲ್ಲಿ ಪ್ರಕೃತಿ ಮಾತೆ ಮುನಿಸು ಮುಗಿಲು ಮುಟ್ಟಿದ್ದು, ದೆಹಲಿಯ ಜನರು ಒಬ್ಬರನ್ನೊಬ್ಬರು ನೋಡಲು ಆಗದಂತಹ ಪರಿಸ್ಥಿತಿ ಎದುರಾಗಿದೆ.
ದೆಹಲಿಯಲ್ಲಿ ಭೀಕರ ಧೂಳಿನ ಬಿರುಗಾಳಿ ಪರಿಣಾಮ ದಟ್ಟವಾದ ದೂಳು ಆವರಿಸಿ ಗಾಳಿಯ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿತ ಕಂಡಿದೆ. ಇದರ ಪರಿಣಾಮ ಮುಂದೆ ಇರುವ ವ್ಯಕ್ತಿಯನ್ನ ಇನ್ನೊಬ್ಬ ವ್ಯಕ್ತಿ ಗುರುತಿಸಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು. ಗಂಟೆಗೆ 30, 35 ಕಿಮೀ ವೇಗದಲ್ಲಿ ಗಾಳಿ ಬೀಸಿದ್ದ ಪರಿಣಾಮ ಮನುಷ್ಯರಿಗೆ ಉಸಿರಾಡಲು ಸೂಕ್ತ ಗಾಳಿ ವ್ಯವಸ್ಥೆ ಇಲ್ಲದಂತಾಗಿತ್ತು. ದೂಳು ಮೇಲೆದ್ದು ವಾತಾವರಣ ಕಲುಷಿತವಾಗಿ ರಾಷ್ಟ್ರ ರಾಜಧಾನಿ ಜನ ಪರದಾಡಿಬಿಟ್ಟರು. ಹಾಗಾದ್ರೆ ದಿಢೀರ್ ಹಿಂಗೆ ಆಗಿದ್ದು ಯಾಕೆ? ನೋಡೋಣ ಬನ್ನಿ.

ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ದೆಹಲಿ ಜನ
ಅಂದಹಾಗೆ ಇಂದು ಬೆಳಗ್ಗೆ 9 ಗಂಟೆಗೆ ಗಾಳಿ ವೇಗ 12 ಕಿಲೋ ಮೀಟರ್‌ಗೆ ತಗ್ಗಿತ್ತು. ಕ್ರಮೇಣ ಇನ್ನಷ್ಟು ಕಡಿಮೆ ಆದ ಪರಿಣಾಮ ವಾತಾವರಣ ತಿಳಿಯಾಗಿತ್ತು. ಆದರೂ ದೆಹಲಿಯ ರಸ್ತೆಗಳಲ್ಲಿ ವಾಹನ ಸವಾರರು ಈ ಭೀಕರ ಧೂಳಿನ ಪರಿಣಾಮ ಪರದಾಡಿದರು. ಮುಂದೆ ಇರುವ ವಾಹನ ಕೂಡ ಕಾಣದಂತಹ ಸ್ಥಿತಿ ಕೆಲವು ಪ್ರದೇಶಗಳಲ್ಲಿ ನಿರ್ಮಾಣ ಆಗಿತ್ತು. ಸಾಮಾನ್ಯವಾಗಿ ಚಳಿಗಾಲ ಸಂದರ್ಭಕ್ಕೆ ದೆಹಲಿ ಇಂಥ ಧೂಳು, ಹೊಗೆ ತುಂಬಿದ ಸ್ಥಿತಿ ಎದುರಿಸುತ್ತದೆ. ಆದರೆ ದಿಢೀರ್ ಬೇಸಿಗೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದು ಶಾಕ್ ಕೊಟ್ಟಿತ್ತು. ಅದರಲ್ಲೂ ವಿಮಾನ ನಿಲ್ದಾಣದ ಸಿಬ್ಬಂದಿ ಪರದಾಡಿದರು.
ವಿಮಾನ ನಿಲ್ದಾಣದಲ್ಲೂ ಸಂಕಷ್ಟ
ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಪಾಲಮ್ ವೀಕ್ಷಣಾಲಯ ಇದ್ದು, ಇಲ್ಲಿ ಬೆಳಗ್ಗೆ 9ಕ್ಕೆ ಗೋಚರತೆ ಮಟ್ಟ 1,100 ಮೀಟರ್ ದಾಖಲಾಗಿತ್ತು. ಅದೇ ನಿನ್ನೆ ಅಂದರೆ ಸೋಮವಾರ ಇದೇ ವೇಳೆಗೆ ಗೋಚರತೆ ಮಟ್ಟವು ಸುಮಾರು 4,000 ಮೀಟರ್‌ನಷ್ಟಿತ್ತು ಎನ್ನಲಾಗಿದೆ. ಇನ್ನ ದೂಳಿನ ಸಾಂಧ್ರತೆ ಹಲವು ಬಾರಿ ಹೆಚ್ಚಳವಾಗಿತ್ತು. ಇದು ದೆಹಲಿ ಜನರನ್ನ ಕಾಡುವ ಜೊತೆಗೆ ವಿಮಾನಗಳ ಹಾರಟದಲ್ಲೂ ಏರುಪೇರಾಗುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದರ ಜೊತೆ ಇನ್ನಷ್ಟು ಆರೋಗ್ಯ ಸಮಸ್ಯೆಗಳು ದೆಹಲಿ ಜನರನ್ನ ಬಾಧಿಸಿದ್ದವು.

ಚಳಿಗಾಲದ ನರಕ ಬೇಸಿಗೆಯಲ್ಲೇ ಪ್ರತ್ಯಕ್ಷ!
ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಯಾಕಂದ್ರೆ ಅಲ್ಲಿ ಹೊಗೆ ಮತ್ತು ಮಂಜು ಸೇರಿ ಹೂಂಜು ನಿರ್ಮಾಣವಾಗಿ, ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ. ಎಷ್ಟೋ ಜನ ಚಳಿಗಾಲ ಬಂತು ಅಂದರೆ ಸಾಕು ದೆಹಲಿ ಬಿಟ್ಟು ಓಡಿ ಬಿಡುತ್ತಾರೆ. ಅದರಲ್ಲೂ ಡಿಸೆಂಬರ್ ಸಂದರ್ಭದಲ್ಲಿ ಅಸ್ತಮಾ ಮತ್ತು ಡಸ್ಟ್ ಅಲರ್ಜಿ ಇರುವವರು ದೆಹಲಿಯಲ್ಲಿ ಇರುವುದೇ ಇಲ್ಲ.
ದೆಹಲಿ ನಿವಾಸಿಗಳಲ್ಲಿ ಚಳಿಗಾಲ ಬಂದ ಸಂದರ್ಭದಲ್ಲಿ ದಕ್ಷಿಣ ಭಾರತ ಅಥವಾ ಈಶಾನ್ಯದ ಕಡೆಗೆ ಹಲವರು ಪ್ರಯಾಣ ಬೆಳೆಸುತ್ತಾರೆ. ಅಲರ್ಜಿ ಇರುವವರಿಗೆ ವೈದ್ಯರೇ ಬೇರೆ ಸ್ಥಳಕ್ಕೆ ಹೋಗುವಂತೆ ಸೂಚಿಸುತ್ತಾರೆ ಎಂಬ ಮಾಹಿತಿ ಇದೆ. ಕೆಲವರು ಮಾತ್ರ ಅಂತಹ ಸಮಯದಲ್ಲಿ ಅನಿವಾರ್ಯವಾಗಿ ದೆಹಲಿಯಲ್ಲಿ ವಾಸಿಸುತ್ತಾರೆ. ಆದ್ರೆ ಈ ಬಾರಿ ಬೇಸಿಗೆಯಲ್ಲೇ ನರಕ ದರ್ಶನ ಆಗಿದೆ. ಜನರು ನಮ್ಮ ಊರಿಗೆ ದಿಢೀರ್ ಏನಾಯ್ತೋ ಅಂತಾ ಪರದಾಡಿದ್ದಾರೆ.

ಇಷ್ಟೊಂದು ಧೂಳಿನ ಪ್ರಮಾಣ ವಾತಾವರಣದಲ್ಲಿ ಹರಡಿದಾಗ ಮನುಷ್ಯರು ಉಸಿರಾಡುವ ವೇಳೆ ದೂಳಿನ ಕಣಗಳು ಶ್ವಾಸಕೋಶಕ್ಕೆ ಸೇರಿ ಸಮಸ್ಯೆ ಎದುರಾಗುತ್ತೆ. ಇದರಿಂದ ಉಸಿರಾಟ ಸಮಸ್ಯೆ ಉಂಟಾಗಿ ಅಸ್ತಮಾ & ಶ್ವಾಸನಾಳಗಳ ಒಳಪೊರೆ ಉರಿಯೂತ & ಅಲರ್ಜಿಯಂಥ ಸಮಸ್ಯೆ ತಲೆದೋರಬಹುದು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಮೊದಲೇ ಭೀಕರ ಬಿಸಿಲಿನ ಪರಿಣಾಮ ತತ್ತರಿಸಿ ಹೋಗಿದ್ದ ರಾಷ್ಟ್ರ ರಾಜಧಾನಿಯ ಜನರಿಗೆ ಭೀಕರ ದೂಳಿನ ಹೊಡೆತ ದೊಡ್ಡ ಸಂಕಷ್ಟ ತಂದಿದ್ದು ಸುಳ್ಳಲ್ಲ.












Click it and Unblock the Notifications