
Breaking: ಜಗತ್ತಿನಾದ್ಯಂತ ನಿಂತು ಹೋಗಿದ್ದ WhatsApp ಸರಿ ಆಯ್ತು!
ನವದೆಹಲಿ, ಅಕ್ಟೋಬರ್ 25: ವಿಶ್ವಾದ್ಯಂತ ಲಕ್ಷಾಂತರ ಜನರ ಸಂಪರ್ಕ ಕೊಂಡಿಯಂತಿದ್ದ ವಾಟ್ಸಾಪ್ ಸರ್ವರ್ ಮತ್ತೆ ಪುನಾರಂಭವಾಗಿದೆ. ಕಳೆದ ಕೆಲವು ಗಂಟೆಗಳಲ್ಲಿ ವಾಟ್ಸಾಪ್ ಸರ್ವರ್ ಡೌನ್ ಆಗಿದ್ದರಿಂದ ಲಕ್ಷಾಂತರ ಜನರು ಮೆಸೇಜ್ ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ಸಾಕಷ್ಟು ಸಮಸ್ಯೆೆ ಸೃಷ್ಟಿಯಾಗಿತ್ತು.
ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಕಳುಹಿಸುವ, ಸ್ವೀಕರಿಸುವ ಮತ್ತು ಕರೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ದೇಶಾದ್ಯಂತದ ಬಳಕೆದಾರರು ಈ ಕುರಿತು ಟ್ವಿಟ್ಟರ್ ಅಂಗಳದಲ್ಲಿ ದೂರುಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಅಂತಿಮವಾಗಿ ಸರಿಯಾಗಿದೆ.
WhatsApp Down: ಭಾರತದ ಹಲವು ನಗರಗಳಲ್ಲಿ ಬಳಕೆದಾರರ ಪರದಾಟ
ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡ ಒಂದು ಗಂಟೆಯೊಳಗೆ, ಮೆಟಾ ಕಂಪನಿಯ ವಕ್ತಾರರು, "ಕೆಲವರು ಪ್ರಸ್ತುತ ಸಂದೇಶಗಳನ್ನು ಕಳುಹಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ WhatsApp ಅನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ," ಎಂದು ಸ್ಪಷ್ಟನೆ ನೀಡಿದ್ದರು.
ವಾಟ್ಸಾಪ್ ಸಮಸ್ಯೆ ಏನು?:
ಡೌನ್ ಡಿಟೆಕ್ಟರ್ ಪ್ರಕಾರ, ಶೇಕಡಾ 85ಕ್ಕಿಂತ ಹೆಚ್ಚು ಜನರು ಸಂದೇಶ ಕಳುಹಿಸುವಾಗ, ಶೇಕಡಾ 11ರಷ್ಟು ಜನರು ಅಪ್ಲಿಕೇಶನ್ ಬಳಸುವಾಗ ಮತ್ತು ಶೇಕಡಾ 3 ರಷ್ಟು ಜನರು ವೆಬ್‌ಸೈಟ್ ಬಳಸುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಭಾರತದಲ್ಲಿ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಲಕ್ನೋ ನಗರಗಳಲ್ಲಿ ಜನರು ಈ ರೀತಿ ವಾಟ್ಸಾಪ್ ಸಂದೇಶದಲ್ಲಿನ ಸಮಸ್ಯೆಯನ್ನು ಎದುರಿಸಿದ್ದಾರೆ. ಆದರೆ ಯುಎಸ್, ಜರ್ಮನಿ, ದಕ್ಷಿಣ ಆಫ್ರಿಕಾ, ಬಹ್ರೇನ್, ಬಾಂಗ್ಲಾದೇಶ ಮತ್ತು ಹಲವಾರು ಇತರ ದೇಶಗಳ ಬಳಕೆದಾರರು ಸಹ ಈ ಸೇವೆಯಲ್ಲಿನ ಅಡಚಣೆಯ ಬಗ್ಗೆ ದೂರು ಸಲ್ಲಿಸಿದ್ದಾರೆ.
ಫೋಟೋ, ವಿಡಿಯೋ ಕಳುಹಿಸುವಲ್ಲಿ ಸಮಸ್ಯೆ:
ಭಾರತದಲ್ಲಿನ ಬಳಕೆದಾರರು ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸುವಾಗ ತೊಂದರೆಯನ್ನು ಎದುರಿಸಿದರು. ಮೀಮ್‌ಗಳು ಮತ್ತು ಜಿಫ್ ಗಳನ್ನು ಪೋಸ್ಟ್ ಮಾಡುವುದು ಸೇರಿದಂತೆ ಫೇಸ್‌ಬುಕ್ ಅಪ್ಲಿಕೇಶನ್‌ಗಳೊಂದಿಗೆ ತಮ್ಮ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ, ಭಾರತ ಸೇರಿದಂತೆ ಲಕ್ಷಾಂತರ ಬಳಕೆದಾರರಿಗೆ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಸ್ಥಗಿತಗೊಂಡಿದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಉಲ್ಲೇಖಿಸಿದ್ದರು.
ಈ ಹಿಂದೆ ಫೇಸ್‌ಬುಕ್ ಎಂದು ಕರೆಯಲ್ಪಡುವ ಮೆಟಾ, 2014 ರಲ್ಲಿ WhatsApp ಅನ್ನು ಖರೀದಿಸಿತು. ಇದು ವಿಶೇಷವಾಗಿ U.S. ನ ಹೊರಗೆ ಬಹಳ ಜನಪ್ರಿಯವಾಗಿದೆ, ಅಲ್ಲಿ ಅನೇಕ ಜನರು ಇದನ್ನು ದೈನಂದಿನ ಸಂವಹನಕ್ಕಾಗಿ ಬಳಸುತ್ತಾರೆ.