Weather Forecast: ಈ ಭಾಗಗಳಲ್ಲಿ ಭೀಕರ ಚಳಿ ನಡುವೆಯೂ ಜನವರಿ 11, 12 & 13ರಂದು ಭಾರೀ ಮಳೆ ಮುನ್ಸೂಚನೆ
Weather Forecast: ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ಭೀಕರ ಚಳಿ ಮುಂದುವರೆದಿದೆ. ಇದರ ನಡುವೆಯೇ ಹಲವು ಭಾಗಗಳಲ್ಲಿ ಮುಂದಿನ 3 ದಿನ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಶ್ಮೀರ ಕಣಿವೆಯಲ್ಲಿ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಕುಸಿತವಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ನಡುವೆಯೇ ಚಳಿ ಜೊತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂವಚನೆ ನೀಡಿದೆ.

ನಿನ್ನೆ (ಜನವರಿ 08) ರಾತ್ರಿ ವೇಳೆ ಪಂಜಾಬ್ ಮತ್ತು ಹರಿಯಾಣದ ಹಲವಾರು ಸ್ಥಳಗಳಲ್ಲಿ ದಟ್ಟವಾದ ಮಂಜಿನ ಜೊತೆ ಚಳಿ ಮುಂದುವರೆದಿದೆ. ಹರಿಯಾಣದ ಕರ್ನಾಲ್ ಮತ್ತು ಅಂಬಾಲಾದಲ್ಲೂ ಮಂಜಿನ ಪ್ರಮಾಣ ಹೆಚ್ಚಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇಂದಿನಿಂದ ಹಲವು ದಿನಗಳವರೆಗೆ ಹಲವು ಪ್ರದೇಶಗಳಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವದೆಹಲಿಯಲ್ಲಿ ಇಂದು (ಜನವರಿ 09) ಮಧ್ಯಾಹ್ನದ ವೇಳೆಗೆ ಬಿಸಿಲಿ ಇರಲಿದೆ. ಇನ್ನು ವಾರಾಂತ್ಯದ ವೇಳೆಗೆ ವಾಯುವ್ಯ ಭಾರತದ ಭಾಗಗಳಲ್ಲಿ ದಟ್ಟ ಮಂಜಿನ ನಡುವೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನವು ಸರಿಸುಮಾರು 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದ್ದು, ನಂತರ 2-4 ಡಿಗ್ರಿಗಳಷ್ಟು ಹೆಚ್ಚಾಗಲಿದೆ. ಬುಧವಾರ ರಾಜಸ್ಥಾನದಲ್ಲಿ ಸಿಕಾರ್ ಜಿಲ್ಲೆಯ ಫತೇಪುರ್‌ನಲ್ಲಿ 1.1 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗಿದೆ.
ನವದೆಹಲಿಯಲ್ಲಿ ಇಂದು ಬೆಳಗ್ಗೆ ದಟ್ಟ ಮಂಜಿನ ಜೊತೆಗೆ ಭೀಕರ ಚಳಿ ಮುಂದುವರೆದಿದೆ. ಇಲ್ಲಿನ ಕೆಲವೆಡೆ ಜನವರಿ 12 ಮತ್ತು 13ರಂದು ಲಘು ಮಳೆಯಾಗುವ ಸಾಧ್ಯತೆಯಿದೆ. ಇನ್ನು ಇಂದು ಬೆಳಗ್ಗೆ ಪಂಜಾಬ್, ಹರಿಯಾಣದಲ್ಲಿ ದಟ್ಟವಾದ ಮಂಜು ಆವರಿಸಿದೆ. ಪಂಜಾಬ್‌ನ ಅಮೃತಸರದಲ್ಲಿ ದಟ್ಟ ಮಂಜು ಕವಿದ ಪರಿಣಾಮ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾದ ಘಟನೆ ನಡೆಯಿತು.
ಪಂಜಾಬ್‌ನಲ್ಲಿ ಜನವರಿ 10ರಂದು ಮಂಜಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಜನವರಿ 11ರಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಭೀಕರ ಚಳಿ ಮುಂದುವರೆದಿದೆ. ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ದಟ್ಟವಾದ ಮಂಜಿನ ಜೊತೆ ಭೀಕರ ಚಳಿ ಮುಂದುವರೆದ ಪರಿಣಾಮ ಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರ, ಇಟಾವಾ ಮತ್ತು ಆಗ್ರಾದಲ್ಲಿ ಚಳಿಯ ಪ್ರಮಾಣ ಹೆಚ್ಚಿದ್ದು, ಕನಿಷ್ಠ ತಾಪಮಾನ 5.6 ಡಿಗ್ರಿ ಸೆಲ್ಸಿಯಸ್ ಆಗಿದೆ. ಗುರುವಾರ ಮತ್ತು ಶುಕ್ರವಾರ ಈ ಭಾಗಗಳಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ. ಶನಿವಾರ ಮತ್ತು ಭಾನುವಾರ ರಾಜ್ಯದ ಕೆಲವು ಪ್ರದೇಶಗಳಲ್ಲಿ ದಟ್ಟ ಮಂಜಿನ ನಡುವೆಯೇ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications