ವಿಡಿಯೋ: ಅಪಘಾತದಲ್ಲಿ ಚಾಲಕ ಮೃತ- ವಾಹನ ಮಾಲೀಕನಿಗೆ ಚಪ್ಪಲಿ ಹೊಡೆತ
ಭೋಪಾಲ್ ಡಿಸೆಂಬರ್ 27: ಮಧ್ಯಪ್ರದೇಶದಲ್ಲಿ ಟ್ರ್ಯಾಕ್ಟರ್ ಅಪಘಾತ ಸಂಭವಿಸಿದ್ದು, ವಾಹನದ ಮಾಲೀಕರಿಗೆ ಥಳಿಸಿದ ಘಟನೆ ನಡೆದಿದೆ. ಸ್ಥಳೀಯ ಟ್ರಾಮಾ ಸೆಂಟರ್ ಆವರಣದಲ್ಲಿ ವಾಹನದ ಮಾಲೀಕನಿಗೆ ಥಳಿತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಾಲಕ ಮರ್ದನ್ ಸಿಂಗ್ ಎಂಬಾತ ಟ್ರ್ಯಾಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಚಾಲಕ ಮರ್ದನ್ ಸಿಂಗ್ ಅವರ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸಿಂಗ್ರೌಲಿ ಜಿಲ್ಲೆಯ ರಾಮಪುರವಾ ಗ್ರಾಮದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮರ್ದನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಗಾಯಗೊಂಡು ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಆದರೆ ಆತನ ಸಂಬಂಧಿಕರು ವಾಹನ ಮಾಲೀಕನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಥಳಿಸಿದ್ದಾರೆ.
ಅಪಘಾತದ ಬಗ್ಗೆ ತಿಳಿದ ಟ್ರ್ಯಾಕ್ಟರ್ ಮಾಲೀಕ ಅಮಿತ್ ವೈಶ್ ಚಾಲಕನನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ ಎಂದು ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿ ಶಿವಕುಮಾರ್ ವರ್ಮಾ ತಿಳಿಸಿದ್ದಾರೆ. ಆದರೆ ಚಾಲಕ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ವೈಶ್ ಅವರು ಮರ್ದನ್ ಸಿಂಗ್ ಸಾವಿನ ಬಗ್ಗೆ ಅವರ ಸಂಬಂಧಿಕರಿಗೆ ತಿಳಿಸಲು ಹೋದಾಗ ಕುಟುಂಬಸ್ಥರು ವೈಶ್ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಕಟ್ಟಿ ಹಾಕಿ ಚಪ್ಪಲಿಯಿಂದ ಥಳಿಸಿದ್ದಾರೆ. ಈ ವೇಳೆ ಆತನ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ. ಬದಲಿಗೆ, ನೋಡುಗರು ಅದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ವೈಶ್ ಅವರು ತಪ್ಪಿಸಿಕೊಂಡು ಹೋಗಿ ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸಿದರು. ಹಲ್ಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರ್ದನ್ ಸಿಂಗ್ ಅವರ ಸಂಬಂಧಿಕರನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications