Heavy Rain: ಭಾರಿ ಮಳೆಗೆ ಕೊಚ್ಚಿಹೋದ ಕಾರು, ಬಸ್‌ಗಳು
ದೇಶದಲ್ಲಿ ಮುಂಗಾರು ಚುರುಕಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನು ಉಂಟುಮಾಡಿದೆ. ಉತ್ತರಾಖಂಡದಲ್ಲಿ ಕೂಡ ಮುಂಗಾರು ಅಬ್ಬರಿಸಲು ಆರಂಭಿಸಿದ್ದು, ನದಿಗಳು ರಭಸವಾಗಿ ಹರಿಯಲು ಆರಂಭಿಸಿವೆ.
ನದಿ ನೀರಿನ ಮಟ್ಟದಲ್ಲಿ ಭಾರಿ ಹೆಚ್ಚಳವಾಗುತ್ತಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಹರಿದ್ವಾರದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿಹರಿಯುತ್ತಿದ್ದು, ಸ್ಮಶಾನದಲ್ಲಿ ನಿಲ್ಲಿಸಲಾಗಿದ್ದ ಅನೇಕ ವಾಹನಗಳು ಕಾಲೋಚಿತ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಹರ್ ಕಿ ಪೌರಿಯಲ್ಲಿ ಉಕ್ಕಿ ಹರಿಯುವ ನದಿಯಲ್ಲಿ ಹಲವಾರು ಕಾರುಗಳು ಮತ್ತು ಬಸ್ಸುಗಳು ಮುಳುಗಿರುವುದನ್ನು ಕಾಣಬಹುದು. ಬಲವಾದ ಪ್ರವಾಹಕ್ಕೆ ಸ್ಮಶಾನದಲ್ಲಿ ನಿಂತಿದ್ದ ಬಸ್‌ಗಳು ಮತ್ತು ಎಂಟು ಕಾರುಗಳು ಕೊಚ್ಚಿಹೋಗಿವೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಯಾತ್ರಿಕರು ಮತ್ತು ಸ್ಥಳೀಯರಿಗೆ ನದಿಯ ಬಳಿ ಹೋಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಮಳೆಯ ನಂತರ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ಎಲ್ಲರೂ ನದಿಯ ಸಮೀಪಕ್ಕೆ ಹೋಗದಂತೆ ವಿನಂತಿಸಲಾಗಿದೆ. ಮಾನ್ಸೂನ್ ಸಮಯದಲ್ಲಿ ನದಿಗಳು ಉಕ್ಕಿ ಹರಿಯುವ ಇಂತಹ ಘಟನೆಗಳು ಉತ್ತರಾಖಂಡದಲ್ಲಿ ಸಾಮಾನ್ಯವಾಗಿವೆ.
ದೆಹಲಿಯಲ್ಲಿ ಕೂಡ ಮಳೆ ಅಬ್ಬರ
ದೆಹಲಿಯಲ್ಲೂ ಕೂಡ ವ್ಯಾಪಕ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟು ಮಾಡಿದೆ. 24 ಗಂಟೆಯಲ್ಲಿ ಅತಿ ಹೆಚ್ಚು ಮಳೆಯಾದ 88 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ. 1936 ರ ನಂತರ ಮೊದಲ ಬಾರಿಗೆ ಕೇವಲ 24 ಗಂಟೆಗಳಲ್ಲಿ 228 ಮಿಮೀ ಮಳೆ ದಾಖಲಾಗಿದೆ. ಭಾನುವಾರ ಕೂಡ ದೆಹಲಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.
ವಾಯುವ್ಯ ದೆಹಲಿಯಲ್ಲಿ ವಿದ್ಯುದಾಘಾತದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದೆಹಲಿಯಾದ್ಯಂತ ಮಳೆ ಸಂಬಂಧಿತ ಸಾವಿನ ಸಂಖ್ಯೆ 10 ಕ್ಕೆ ಏರಿದೆ. ಶನಿವಾರ ಮುಂಜಾನೆ ವಸಂತ ವಿಹಾರ್‌ನಲ್ಲಿ ಗೋಡೆ ಕುಸಿತದಿಂದ ಐವರು ಸಾವನ್ನಪ್ಪಿದ್ದಾರೆ.
ಶನಿವಾರ ಭಾರಿ ಮಳೆ ಸುರಿದ ಕಾರಣ ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಭಾಗದ ಮೇಲಾವರಣ ಕುಸಿದು ಬಿದ್ದಿದೆ. ಟರ್ಮಿನಲ್‌ನ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ದೆಹಲಿ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳಲ್ಲಿ ಮೇಲಾವರಣ ಕುಸಿದ ನಂತರ ಇದು ಮೂರನೆಯ ಘಟನೆಯಾಗಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ನಲ್ಲಿ ಮೇಲಾವರಣ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದರು. ಗುಜರಾತ್‌ನಲ್ಲಿ ಮುಂದಿನ ಐದು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications