ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರ್ಕಾರದ ಚಿಂತನೆ?
ನವದೆಹಲಿ, ಏಪ್ರಿಲ್ 07 : ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ಏಪ್ರಿಲ್ 14ರ ಬಳಿಕವೂ ಲಾಕ್ ಡೌನ್ ವಿಸ್ತರಣೆ ಆಗಲಿದೆಯೇ? ಎಂಬುದು ಸದ್ಯದ ಚರ್ಚೆ.
ಹಲವು ರಾಜ್ಯಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಲಾಕ್ ಡೌನ್ ಮುಂದುವರೆಸಬೇಕು ಎಂಬ ನಿಲುವು ಹೊಂದಿದ್ದಾರೆ. ಕೇಂದ್ರ ಸರ್ಕಾರ ಈಗ ಇದೇ ಹಾದಿಯಲ್ಲಿ ಆಲೋಚನೆಯನ್ನು ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಇದೇ ವಿಚಾರದ ಕುರಿತು ಚರ್ಚೆ ನಡೆದಿದೆ. ದೇಶದ ಜನರು ಇನ್ನಷ್ಟು ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಹೇಳಿರುವ ಮೋದಿ, ಎಲ್ಲಾ ಸಚಿವರು ತಮ್ಮ ಆಲೋಚನೆಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ.
"ದೇಶದ ಹಿತದೃಷ್ಟಿಯಿಂದ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ಘೋಷಣೆ ಮಾಡಲಾಗುತ್ತದೆ" ಎಂದು ಸಂಪುಟ ಸಭೆಯ ಬಳಿಕ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

"ದೇಶ ಮತ್ತು ವಿಶ್ವದ ಸ್ಥಿತಿಗತಿಯನ್ನು ನಾವು ಗಮನಿಸುತ್ತಿದ್ದೇವೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಂಡು ಸರಿಯಾದ ಸಮಯದಲ್ಲಿ ಘೋಷಣೆ ಮಾಡುತ್ತೇವೆ" ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮುಂಬೈ, ಪುಣೆ ಸೇರಿದಂತೆ ಹೆಚ್ಚು ಕೊರೊನಾ ಪ್ರಕರಣದ ದಾಖಲಾದ ಕಡೆ ಲಾಕ್ ಡೌನ್ ಮುಂದುವರೆಸಬೇಕು ಎಂಬ ನಿಲುವು ಹೊಂದಿದೆ.
ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳುವ ಮೊದಲು ರಾಜ್ಯಗಳ ನಿಲುವು ಕೇಳಲಿದೆ. ತಜ್ಞರ ಜೊತೆ ಸಮಾಲೋಚನೆಯನ್ನು ನಡೆಸಲಿದೆ. ಎರಡು ಅಥವ ಮೂರು ದಿನದಲ್ಲಿ ಈ ಕುರಿತು ಅಂತಿಮ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.












Click it and Unblock the Notifications