ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್
ಅಗರ್ತಲ, ಏಪ್ರಿಲ್ 28: "ನಿಜವಾದ ಭಾರತೀಯ ಮಹಿಳೆ ಎಂದರೆ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ. ಆಕೆ ಹೇಗೆ ವಿಶ್ವ ಸುಂದರಿ ಆದರೋ ಗೊತ್ತಿಲ್ಲ" ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
"ನಾನು ಕೈಮಗ್ಗಳಲ್ಲಿ ಕೆಲಸ ಮಾಡುವ ಜನರ ಬಗ್ಗೆ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲಿ ನಮ್ಮ ದೇಶಿ ಉತ್ಪನ್ನಗಳಿಗೆ ಬೆಲೆ ಇಲ್ಲ ಎಂಬುದನ್ನು ಹೇಳುವಾಗ ಆ ರೀತಿ ಉದಾಹರಣೆ ನೀಡಿದೆ. ನನ್ನ ಕಾಳಜಿ ಕೈಮಗ್ಗದಲ್ಲಿ ದುಡಿವ ಜನರ ಮೇಲಿತ್ತು. ಯಾವುದೇ ವ್ಯಕ್ತಿಯನ್ನು ನೋಯಿಸುವ ಉದ್ದೇಶವಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ" ಎಂದು ಅವರು ಹೇಳಿದ್ದಾರೆ.

ಕೈಮಗ್ಗ ಕಾರ್ಖಾನೆಯ ಕಾರ್ಯಾಗಾರವೊಂದರಲ್ಲಿಮಾತನಾಡುತ್ತಿದ್ದ ಅವರು ವಿವಾದಾತ್ಮಕ ಹೇಳಿಕೆ ನೀದಿದ್ದರು. ಈ ಹೇಳಿಕೆಯ ನಂತರ ಪ್ರತಿಕ್ರಿಯಿಸಿದ್ದ ದಯಾನಾ ಹೆಡನ್, 'ಮುಖ್ಯಮಂತ್ರಿಗಳು ನನ್ನ ಚರ್ಮದ ಬಣ್ಣ ನೋಡಿ ಹೀಗೆ ಹೇಳಿದ್ದಾರೆ ಎಂಬುದು ನನಗೆ ಗೊತ್ತು. ನನ್ನ ಕಂದುಬಣ್ಣದ ಚರ್ಮದಿಂದಲೇ ನಾನು ಚಿಕ್ಕ ವಯಸ್ಸಿನಿಂದ ಸಾಕಷ್ಟು ಟೀಕೆಗಳನ್ನು ಕೇಳಿದ್ದೇನೆ. ಆದರೂ ನಾನು ಕಂದುಬಣ್ಣದ ಹೆಮ್ಮೆಯ ಭಾರತೀಯ ಮಹಿಳೆ ಎಂಬ ಖುಷಿ ನನಗಿದೆ. ಜವಾಬ್ದಾರಿಯುತ ಹುದ್ದೆಯಲ್ಲಿರುವವರು ತಾವಾಡುವ ಮಾತಿನ ಬಗ್ಗೆ ಎಚ್ಚರಿಕೆ ವಹಿಸಬೇಕು' ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಡಯಾನಾ ಪ್ರತಿಕ್ರಿಯೆಯ ನಂತರ ವಿಪ್ಲವ್ ದೇವ್ ಕ್ಷಮೆ ಯಾಚಿಸಿದ್ದಾರೆ. 1994 ರಲ್ಲಿ ಡಯಾನಾ ಹೆಡನ್ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದರು.












Click it and Unblock the Notifications