ಗಂಡ ಮಾಡಿದ ತಪ್ಪಿಗೆ ಹೆಂಡತಿ ಕ್ಷಮಾಪಣೆ, ವಾಹ್!
ಕೋಲ್ಕತ್ತಾ, ಜು.1 : ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ತಪಸ್ ಪಾಲ್ ಅವರ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೆ, ಪಾಲ್ ಪರವಾಗಿ ಪತ್ನಿ ನಂದಿನಿ ಪಾಲ್ ಅವರು ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ. ಪತಿ ದೇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಇಂತಹ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸೋಮವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಟಿಎಂಸಿ ಸಂಸದ ತಪಸ್ ಪಾಲ್, ಅವರು "ನಮ್ಮ ಸಿಪಿಎಂ ಕಾರ್ಯಕರ್ತರನ್ನು ಕೊಂದರೆ ನೀವು ಅವರ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಅತ್ಯಾಚಾರವೆಸಗಿ ಎಂದು ಕರೆ ನೀಡಿದ್ದರು". ದೇಶಾದ್ಯಂತ ಈ ಹೇಳಿಕೆಗೆ ಖಂಡನೆ ವ್ಯಕ್ತವಾಗಿತ್ತು. ತಪಸ್ ಅವರನ್ನು ಬಂಧಿಸುವಂತೆ ಮಹಿಳಾ ಸಂಘಟನೆಗಳು ಒತ್ತಾಯಿಸಿದ್ದವು.

ಮಂಗಳವಾರ ಪತಿ ದೇವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ತಪಸ್ ಪತ್ನಿ ನಂದಿನಿ ಪಾಲ್, ನನ್ನ ಪತಿಯ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಇಂತಹ ಹೇಳಿಕೆ ನೀಡುವಂತೆ ನನ್ನ ಪತಿಗೆ ಕೆಲವರು ಪ್ರಚೋದನೆ ನೀಡಿದ್ದಾರೆ ಎಂದು ನಂದಿನಿ ಅವರು ಆರೋಪಿಸಿದ್ದಾರೆ. [ಈ ಸಂಸದನ ಮಾತನ್ನು ಕೇಳಿದ್ರಾ?]
'ಅವರ ಹೇಳಿಕೆಗೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಹೇಳಿಕೆಯನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ. ಆದರೆ ಇಡೀ ಪ್ರಕರಣದಲ್ಲಿ, ಅವರನ್ನು ಪ್ರಚೋದಿಸಿದ ಘಟನೆಯ ಇನ್ನೊಂದು ಮುಖವೂ ಇದೆ. ಇಡೀ ಪ್ರಕರಣ ಬಹಳ ಹಿಂದೆ ನಡೆದಿದ್ದು. ಅದೇ ಇಂದಿನ ವಿವಾದಕ್ಕೆ ಕಾರಣ'' ಎಂದು ನಂದಿನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿವರಣೆ ನೀಡಲು ಗಡುವು : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದನ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷ ತಪಸ್ ಪಾಲ್ ಅವರಿಗೆ 48 ಗಂಟೆಗಳ ಗಡುವು ನೀಡಿದ್ದು, ಅಷ್ಟರೊಳಗೆ ಈ ಕುರಿತು ಲಿಖಿತ ರೂಪದಲ್ಲಿ ವಿವರಣೆ ನೀಡುವಂತೆ ಆದೇಶಿಸಿದೆ.












Click it and Unblock the Notifications