Haryana: ಯಾರಾಗಲಿದ್ದಾರೆ ಹರಿಯಾಣದ ಹೊಸ ಸಿಎಂ? ಪ್ರಮಾಣವಚನಕ್ಕೆ ಡೇಟ್ ಫಿಕ್ಸ್
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದೆ. ಇದರ ಬೆನ್ನಲ್ಲೇ ನೂತನ ಸರ್ಕಾರ ರಚನೆಗೆ ಕಮಲ ಜೋಶ್‌ನಲ್ಲಿದ್ದು, ಮೂಲಗಳ ಪ್ರಕಾರ ಇದೇ ಅಕ್ಟೋಬರ್ 15ರಂದು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದೆ.
ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಹೇಳಿದಂತೆ ಹರಿಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದಿದ್ದವು. ಮತ ಎಣಿಕೆ ಆರಂಭದಲ್ಲಿ ಇದಕ್ಕೆ ಪೂರಕವಾದ ವಾತಾವರಣವೇ ಇತ್ತು. ಆದರೆ ಮಧ್ಯಾಹ್ನದ ವೇಳೆ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತು.

ಕೊನೆಗೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದು ಬೀಗಿತು. ಕಾಂಗ್ರೆಸ್ 37, ಐಎನ್‌ಎಲ್‌ಡಿ 2, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಮತ್ತೊಂದೆಡೆ ಹ್ಯಾಟ್ರಿಕ್ ಸರ್ಕಾರ ರಚನೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದೆ.
ಇನ್ನು ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಬಿಜೆಪಿ ಸದ್ದಿಲ್ಲದೆ ಪ್ರಮಾಣವಚನಕ್ಕೆ ಸಜ್ಜಾಗಿದೆ. ಈಗಾಗಲೇ ಸೈನಿ ಅವರು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಹಾಗಾಗಿ ಹರಿಯಾಣದ ಚುಕ್ಕಾಣಿಯನ್ನು ಸೈನಿ ಅವರೇ ಹಿಡಿಯಲಿದ್ದಾರಂತೆ.
ಹರಿಯಾಣದಲ್ಲಿ ನೂತನ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅಕ್ಟೋಬರ್ 15ರಂದು ಪಂಚಕುಲದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಂಚಕುಲದಲ್ಲಿ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಆದರೆ ಅಕ್ಟೋಬರ್ 15ರಂದು ಎಂದು ತಾತ್ಕಾಲಿಕ ದಿನಾಂಕ ನಿಗದಿಯಾಗಿದೆಯಂತೆ.

ಬಿಜೆಪಿ ಪ್ರಮಾಣ ವಚನ ಸಮಾರಂಭಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಪ್ರಮುಖರು ಭಾಗಿಯಾಗುವ ನಿರೀಕ್ಷೆ ಇದೆ
ಇದೇ ವರ್ಷದ ಮಾರ್ಚ್‌ನಲ್ಲಿ ಹರಿಯಾಣ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಬದಲಿಸಿತ್ತು. ಈ ವೇಳೆ ಹಿಂದುಳಿದ ವರ್ಗಗಳಿಂದ ಹಿನ್ನೆಲೆಯಿರುವ ನಯಾಬ್ ಸಿಂಗ್ ಸೈನಿ ಅವರು ಗೆದ್ದರೆ, ಸಿಎಂ ಆಗೋದು ಖಚಿತ ಎಂದೇ ಚುನಾವಣೆಯ ಸಂದರ್ಭದಲ್ಲಿ ಮಾತುಗಳು ಕೇಳಿಬಂದಿದ್ದವು. ಹಾಗಾಗಿ ಬಹುತೇಕ ಸೈನಿ ಅವರೇ ಸಿಎಂ ಆಗುವ ಸಾಧ್ಯತೆ ಇದೆ.
ಕಾಂಗ್ರೆಸ್‌ಗೆ ಉಲ್ಟಾ ಹೊಡೆದ ಸಮೀಕ್ಷೆ: ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಹರಿಯಾಣದಲ್ಲಿ ಕಾಂಗ್ರೆಸ್ ಗದ್ದುಗೆಯೇರುವುದು ನಿಶ್ಚಿತ ಎಂದು ಭವಿಷ್ಯ ನುಡಿದವು. ಮತ ಎಣಿಕೆ ಆರಂಭದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿತು. 90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆಬೀರಿತ್ತು. ಬಹುತೇಕ ಕಾಂಗ್ರೆಸ್ ಗೆಲ್ಲುವುದು ಖಚಿತ ಎನ್ನುವಷ್ಟರಲ್ಲಿ ಅಂಕಿಗಳು ತಲೆಕೆಳಗಾಗಿದ್ದವು. ಅಂತಿಮವಾಗಿ ಬಿಜೆಪಿ ಗೆದ್ದು ಬೀಗಿತು.












Click it and Unblock the Notifications