Telangana Assembly Election 2023: ಸಿನಿಮಾ ಸ್ಟೈಲ್ ಅಲ್ಲೇ ಅಮಿತ್ ಶಾ ಮುಂದೆ ಕುಳಿತು 20 ಟಿಕೆಟ್ ಕೇಳಿದ ಪವನ್ ಕಲ್ಯಾಣ್
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಬುಧವಾರ ಸಂಜೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕುರಿತು ಚರ್ಚಿಸಿದ್ದಾರೆ.
ಬಿಜೆಪಿ ಮತ್ತು ಜನಸೇನಾ ಇಂದು ಹೈದರಾಬಾದ್‌ನಲ್ಲಿ ಸೀಟು ಹೊಂದಾಣಿಕೆ ಕುರಿತು ಚರ್ಚೆ ನಡೆಸಲಿದೆ. ತಮ್ಮ ಪಕ್ಷಕ್ಕೆ 20 ಕ್ಕೂ ಅಧಿಕ ಟಿಕೆಟ್‌ಗಳು ಬೇಕೆಂದು ಅಮಿತ್ ಶಾ ಅವರಿಗೆ ಪವನ್ ಕಲ್ಯಾಣ್ ಕೇಳಿದ್ದಾರೆಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಗ್ರೇಟರ್ ಹೈದರಾಬಾದ್ ಕ್ಷೇತ್ರಗಳಾದ ಕುಕಟ್‌ಪಲ್ಲಿ, ಸೆರಿಲಿಂಗಂಪಲ್ಲಿ, ಎಲ್‌ಬಿ ನಗರ ಮತ್ತು ಆಂಧ್ರ ಗಡಿ ಕ್ಷೇತ್ರಗಳಾದ ಜಂಟಿ ಖಮ್ಮಂ ಮತ್ತು ನಲ್ಗೊಂಡ ಜಿಲ್ಲೆಗಳ ಮೇಲೆ ಜನಸೇನೆ ಕಣ್ಣಿಟ್ಟಿದೆ.
ಆಯಾ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಪ್ರಾಬಲ್ಯ ಆಧರಿಸಿ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.
ಈ ಹಿಂದೆ ಜನಸೇನೆ 32 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಆದರೆ, ಬಿಜೆಪಿ ಈಗಾಗಲೇ ತನ್ನ ಮೊದಲ ಪಟ್ಟಿಯಲ್ಲಿ 10 ಅಭ್ಯರ್ಥಿಗಳನ್ನು ( ಜನಸೇನೆ ಘೋಷಿಸಿದ್ದ 32 ವಿಧಾನಸಭಾ ಕ್ಷೇತ್ರಗಳ ಪೈಕಿ ) ಘೋಷಿಸಿದೆ.
ಪವನ್ ಕಲ್ಯಾಣ್ ಅವರು ತೆಲಂಗಾಣದಲ್ಲಿ ವಾರಾಹಿ ಯಾತ್ರೆಯನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಪಕ್ಷವು ರಾಜ್ಯದ ವಿವಿಧ ಸ್ಥಳಗಳಲ್ಲಿ ಅನೇಕ ಸಾರ್ವಜನಿಕ ಸಭೆಗಳನ್ನು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಬಂಧನದ ನಂತರ ಪವನ್ ಕಲ್ಯಾಣ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವುದಾಗಿ ತಿಳಿಸಿದ್ದರು. ಜನಸೇನಾ ನೆರೆಯ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದೊಂದಿಗೆ (ಟಿಡಿಪಿ) ಮೈತ್ರಿ ಮಾಡಿಕೊಂಡಿದೆ. 2024 ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯನ್ನು ಸೋಲಿಸಲೇಬೇಕೆಂದು ಯತ್ನಿಸುತ್ತಿದೆ.
ತೆಲಂಗಾಣ ಚುನಾವಣೆ ದಿನಾಂಕ
ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30, 2023 ರಂದು ನಡೆಯಲಿದೆ. ಮತಗಳ ಎಣಿಕೆಯನ್ನು ಡಿಸೆಂಬರ್ 3, 2023 ರಂದು ಮಾಡಲಾಗುತ್ತದೆ.
ಅಕ್ಟೋಬರ್ 9 ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕಗಳನ್ನು ಘೋಷಿಸಿತು.
ತೆಲಂಗಾಣದಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳಿವೆ. ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 3.17 ಕೋಟಿ ಇದೆ. ಇಲ್ಲಿ ಸಮಾನ ಸಂಖ್ಯೆಯ ಪುರುಷ ಮತ್ತು ಮಹಿಳಾ ಮತದಾರರಿದ್ದಾರೆ. ತಲಾ 1.58 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
2018ರಲ್ಲಿ ಡಿಸೆಂಬರ್ 7ರಂದು ವಿಧಾನಸಭೆ ಚುನಾವಣೆ ನಡೆದು ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಿತ್ತು.
ಅಕ್ಟೋಬರ್ 9 ರಂದು ಘೋಷಿಸಲಾದ ವೇಳಾಪಟ್ಟಿಯಂತೆ, ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೆ ಗೆಜೆಟ್ ಅಧಿಸೂಚನೆಯನ್ನು ನವೆಂಬರ್ 3, 2023 ರಂದು ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಸಲು ನವೆಂಬರ್ 10, 2023 ಕೊನೆಯ ದಿನಾಂಕವಾಗಿದೆ.












Click it and Unblock the Notifications