Telangana Assembly Election 2023: ತೆಲಂಗಾಣ ಚುನಾವಣೆಯ ವೇಳಾಪಟ್ಟಿ, ದಿನಾಂಕ, ಸಮಯ, ವಿವರ ತಿಳಿಯಿರಿ
ನವದೆಹಲಿ, ಅಕ್ಟೋಬರ್ 09: ದೇಶದ ಐದು ರಾಜ್ಯಗಳ ವಿಧಾನಸಭೆ ಚುಣಾವಣೆಗೆ ದಿನಾಂಕಗಳು ನಿಗದಿಯಾಗಿವೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಭಾರತೀಯ ಚುನಾವಣೆ ಆಯೋಗ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಹಾಗೂ ಮಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ.
ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ಚುನಾವಣೆಯು ನವೆಂಬರ್ 30 ರಂದು ನಡೆಯಲಿದೆ. ನವೆಂಬರ್ 3 ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅರ್ಜಿಗಳನ್ನು ಹಿಂಪಡೆಯಲು ನವೆಂಬರ್ 15 ಕೊನೆಯ ದಿನವಾಗಿದೆ. ನವೆಂಬರ್ 13 ರಂದು ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಕಾರ, ತೆಲಂಗಾಣದಲ್ಲಿ ಮತದಾರರ ಪಟ್ಟಿಗೆ 17.1 ಲಕ್ಷ ಹೊಸಬರು ಸೇರ್ಪಡೆಗೊಂಡಿದ್ದಾರೆ. 18 ರಿಂದ 19 ವರ್ಷದೊಳಗಿನ ಯುವಕರ ಸಂಖ್ಯೆ 3.35 ಲಕ್ಷ ಆಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ನಾಗರಿಕರಿಗೆ ಮನವಿ ಮಾಡಿದರು.
'ಐದು ರಾಜ್ಯಗಳಲ್ಲಿ 60.20 ಲಕ್ಷ ಹೊಸ ಮತದಾರರು ನೋಂದಣಿಯಾಗಿದ್ದಾರೆ. ಕ್ರಿಮಿನಲ್ ಇತಿಹಾಸ ಹೊಂದಿರುವ ಅಭ್ಯರ್ಥಿಗಳು ತಮ್ಮ ಇತಿಹಾಸವನ್ನು ಪತ್ರಿಕೆಗಳು, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಮೂರು ಬಾರಿ ಪ್ರಕಟಿಸಬೇಕು' ಎಂದು ಹೇಳಿದ್ದಾರೆ.
ಕ್ರಿಮಿನಲ್ ಇತಿಹಾಸ ಹೊಂದಿರುವವರಿಗೆ ಏಕೆ ಟಿಕೆಟ್ ನೀಡಲಾಗಿದೆ ಎಂಬುದನ್ನು ಪಕ್ಷಗಳು ಸಹ ವಿವರಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಚುನಾವಣೆಗಳ ಮೇಲ್ವಿಚಾರಣೆಯನ್ನು ಮಾಡಲು ಐದು ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಸೀಜರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಪರಿಚಯಿಸಲಾಗುತ್ತಿದೆ. ಇದು ಐದು ರಾಜ್ಯಗಳಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡುವಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ತೆಲಂಗಾಣದ 119 ಕ್ಷೇತ್ರಗಳಲ್ಲಿ 3 ಕೋಟಿ ಮತದಾರರಿದ್ದಾರೆ. ಇದರಲ್ಲಿ 1.58 ಕೋಟಿ ಮಹಿಳೆಯರು ಮತ್ತು 1.58 ಕೋಟಿ ಮತದಾರರು ಪುರುಷ ಮತದಾರರಿದ್ದಾರೆ. 2,557 ಮತದಾರರು ತೃತೀಯಲಿಂಗಿಗಳಾಗಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಈ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಭಾರೀ ಕುತೂಹಲ ಕೆರಳಿಸಿವೆ. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಪೈನಲ್ ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ.












Click it and Unblock the Notifications