ತೆಲಂಗಾಣ ಬಿಜೆಪಿಯಿಂದ ಹಾರಿದ ಬಿಗ್ ವಿಕೆಟ್- ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಪ್ರಭಾವಿ ನಾಯಕ
ಹೈದರಾಬಾದ್, ಅಕ್ಟೋಬರ್ 01: ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಪ್ರಭಾವಿ ನಾಯಕರ ಪಕ್ಷಾಂತರ ಭರಾಟೆ ಜೋರಾಗಿದೆ. ಅದರಲ್ಲೂ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಅಧಿಕವಾಗಿದೆ.
ಕರ್ನಾಟಕದಂತೆಯೇ ತೆಲಂಗಾಣದಲ್ಲೂ ಕಾಂಗ್ರೆಸ್ ಜಯಶಾಲಿ ಆಗಬಹುದು ಎಂದು ಹಲವಾರು ಸಮೀಕ್ಷೆಗಳು ಹೇಳಿವೆ. ಬಿಆರ್‌ಎಸ್ ನಾಯಕ ಕೆ ಚಂದ್ರಶೇಖರ್ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಲಾಗುತ್ತಿದೆ. ಇದು ನಾಯಕರ ಪಕ್ಷಾಂತರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದು.
ಬಿಜೆಪಿಯ ಮಾಜಿ ಸಂಸದ ಹಾಗೂ ಪ್ರಭಾವಿ ನಾಯಕ ವಿವೇಕ್ ವೆಂಕಟಸ್ವಾಮಿ ಅವರು ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ನೊವೊಟೆಲ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ವಿವೇಕ್ ವೆಂಕಟಸ್ವಾಮಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರು ತಮ್ಮ ಪುತ್ರ ವಂಶಿ ಅವರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.

ವಿವೇಕ್ ಅವರು ಬಿಜೆಪಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ರಾಜ್ಯ ಪ್ರಣಾಳಿಕೆ/ಪ್ರಜಾವಾಣಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಕೂಡ ಅವರು ಅಲಂಕರಿಸಿದ್ದರು.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಅವರಿಗೆ ಬರೆದ ಪತ್ರದಲ್ಲಿ, 'ಭಾರವಾದ ಹೃದಯದಿಂದ ನಾನು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ.
ವಿವೇಕ್ ವೆಂಕಟಸ್ವಾಮಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಚೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.
ವಿವೇಕ್ ವೆಂಕಟಸ್ವಾಮಿ ಅವರ ನಿರ್ಗಮನ ತೆಲಂಗಾಣ ಬಿಜೆಪಿಗೆ ಭಾರೀ ಹಿನ್ನಡೆಯನ್ನು ಉಂಟುಮಾಡಿದೆ. ವಿವೇಕ್ ವೆಂಕಟಸ್ವಾಮಿ ಹೈಪ್ರೊಪೈಲ್ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.

ಕಳೆದ ವಾರ ಕಾಂಗ್ರೆಸ್‌ಗೆ ಮರಳಿದ ಕೋಮಟಿರೆಡ್ಡಿ ರಾಜ್‌ಗೋಪಾಲ್ ರೆಡ್ಡಿ ಅವರು ಬಿಜೆಪಿಯಿಂದ ಇತ್ತೀಚೆಗಷ್ಟೇ ನಿರ್ಗಮಿಸಿದ ಬೆನ್ನಲ್ಲೇ ವಿವೇಕ್ ವೆಂಕಟಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ರಾಜ್ ಗೋಪಾಲ್ ರೆಡ್ಡಿ ಮುನುಗೋಡು ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಎದುರಿಸಿದರು. ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ನವೆಂಬರ್ 2022 ರಲ್ಲಿ ನಡೆದ ಚುನಾವಣೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ತೆಲಂಗಾಣದಲ್ಲಿ ಬಿಆರ್‌ಎಸ್‌ಗೆ ಪರ್ಯಾಯವಾಗಿ ಬಿಜೆಪಿ ಹೊರಹೊಮ್ಮಲು ಸಾಧ್ಯವಾಗಿಲ್ಲ ಎಂದು ರಾಜ್ ಗೋಪಾಲ್ ರೆಡ್ಡಿ ಹೇಳಿದ್ದಾರೆ. ಜನರು ಕಾಂಗ್ರೆಸ್ ಪಕ್ಷವನ್ನು ಪರ್ಯಾಯವಾಗಿ ನೋಡುತ್ತಿರುವುದರಿಂದ ನಾನು ಕಾಂಗ್ರೆಸ್‌ಗೆ ಮರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ತೆಲಂಗಾಣ ಬಿಜೆಪಿಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳು ಎದ್ದಿವೆ. ಪಕ್ಷದೊಳಗೆ ನಿರ್ದೇಶನದ ಕೊರತೆಯಿಂದ ಅಸ್ತವ್ಯಸ್ತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಅಧಿಕಾರ ಹಿಡಿಯಲು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿವೆ. ಆಡಳಿತಾರೂಢ ಬಿಆರ್‌ಎಸ್‌ಗೆ ಕಾಂಗ್ರೆಸ್ ಕಠಿಣ ಸ್ಪರ್ಧೆಯನ್ನು ನೀಡಬಹುದು ಎಂದು ಹೇಳಿವೆ.












Click it and Unblock the Notifications