Farmers Protest: ಆಶ್ರುವಾಯು, ಜಲಫಿರಂಗಿ ದಾಳಿ; ಪ್ರತಿಭಟನೆ ವೇಳೆ ಹಲವು ರೈತರಿಗೆ ಗಾಯ
ದೆಹಲಿಯತ್ತ ಸಾಗುತ್ತಿದ್ದ ಪ್ರತಿಭಟನಾ ನಿರತ ರೈತರ ಮೇಲೆ ಶಂಭು ಗಡಿ ಬಳಿಕ ಶನಿವಾರ ಭದ್ರತಾ ಸಿಬ್ಬಂದಿ ಆಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು, ಜಲಫಿರಂಗಿ ಕೂಡ ಪ್ರಯೋಗಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ರೈತರು ಶನಿವಾರ ಪ್ರತಿಭಟನಾ ಸ್ಥಳದಿಂದ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದರು. ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಗಡಿಗೆ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆ ಭದ್ರತಾ ಪಡೆಗಳು ಆಶ್ರುವಾಯು ಸಿಡಿಸಿವೆ.
ಆಶ್ರುವಾಯು ಶೆಲ್ ದಾಳಿಯಲ್ಲಿ ಹಲವು ರೈತರು ಗಾಯಗೊಂಡಿದ್ದು ಪ್ರತಿಭಟನಾ ಸ್ಥಳದಲ್ಲಿದ್ದ ಆಂಬುಲೆನ್ಸ್‌ಗಳಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಹಿಡಿದಿದ್ದ 101 ರೈತರ ಗುಂಪು ದೆಹಲಿಗೆ ಪಾದಯಾತ್ರೆ ಆರಂಭಿಸಿತ್ತು, ಶಂಭು ಗಡಿ ಮೂಲಕವೇ ದೆಹಲಿಗೆ ಪ್ರವೇಶಿಸಬೇಕಾಗಿದ್ದರಿಂದ ಈ ಪ್ರದೇಶದಲ್ಲಿ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಅಂಬಾಲಾ ಡೆಪ್ಯುಟಿ ಕಮಿಷನರ್ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಾಡುತ್ತಿದ್ದ ರೈತರ ಬಳಿ ಮಾತುಕತೆ ನಡೆಸಿದರು. ದೆಹಲಿಯಲ್ಲಿ ಪಾದಯಾತ್ರೆ ಮಾಡಲು ಅಲ್ಲಿನ ಪೊಲೀಸರ ಅನುಮತಿ ಪಡೆಯಬೇಕೆಂದು ರೈತರ ಗಮನಕ್ಕೆ ತಂದರು. ಆದರೆ ರೈತರು ನಾವು ದೆಹಲಿಗೆ ಹೋಗಲೇಬೇಕು, ಮುಂದುವರೆಯಲು ಭದ್ರತಾ ಸಿಬ್ಬಂದಿ ಅವಕಾಶ ಕೊಡಬೇಕು ಎಂದು ಪಟ್ಟುಹಿಡಿದರು.
ಪೊಲೀಸರು ನಿರಾಕರಿಸಿದರು, ರೈತರ ಗುಂಪು ಮುಂದೆ ನಡೆಯಲು ಆರಂಭಿಸಿತು. ಹರಿಯಾಣ ಭದ್ರತಾ ಸಿಬ್ಬಂದಿ ಬ್ಯಾರಿಕೇಡ್ ಹಾಕುವ ಮೂಲಕ ರೈತರನ್ನು ತಡೆಯಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ರೈತರನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ.
ಪ್ರತಿಭಟನಾಕಾರರು ದೆಹಲಿಯತ್ತ ಸಾಗಲು ಇದು ಡಿಸೆಂಬರ್ ತಿಂಗಳಿನಲ್ಲಿ ಮಾಡುತ್ತಿರುವ ಮೂರನೇ ಪ್ರಯತ್ನವಾಗಿದೆ. ಡಿಸೆಂಬರ್ 6 ಮತ್ತು 8ರಂದು ಈಗಾಗಲೇ ಎರಡು ಬಾರಿ ಪ್ರಯತ್ನ ಮಾಡಲಾಗಿತ್ತು, ಆದರೆ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರಿಗೆ ದೆಹಲಿ ಪ್ರವೇಶಿಸಲು ಅನುಮತಿ ಕೊಟ್ಟಿರಲಿಲ್ಲ.
ಹೈಅಲರ್ಟ್, ಇಂಟರ್ನೆಟ್ ಸೇವೆ ಸ್ಥಗಿತ
ರೈತರ ಮೇಲೆ ಆಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದರಿಂದ ಉಳಿದ ರೈತ ಸಮುದಾಯ ಸಿಟ್ಟಿಗೇಳುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ ಅಂಬಾಲದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಅಂಬಾಲಾ ಜಿಲ್ಲಾಡಳಿತವು ಈಗಾಗಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಯ ಸೆಕ್ಷನ್ 163 ರ ಅಡಿಯಲ್ಲಿ ಜಿಲ್ಲೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ಜನ ಒಂದೆಡೆ ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಮತ್ತೆ ದೆಹಲಿಗೆ ಪಾದಯಾತ್ರೆ ನಡೆಸಲು ರೈತರು ತೀರ್ಮಾನಿಸಿದ್ದಾರೆ.












Click it and Unblock the Notifications