1200 ಕೆಟ್ಟ ಬೋರ್‌ವೆಲ್‌ಗಳೇ ಮಳೆನೀರು ಕೊಯ್ಲು ಘಟಕ: IAS ಅಧಿಕಾರಿ ಸಾಹಸಕ್ಕೆ ನಟ ಮಾಧವನ್ ಸೆಲ್ಯೂಟ್
ಮಳೆಗಾಲ ಶುರುವಾಗಿದೆ. ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಕೂಡಾ ಸಿಕ್ಕಿದೆ. ಆದ್ರೆ ಬೇಸಿಗೆ ಶುರುವಾದ್ರೆ ಸಾಕು ಮತ್ತದೇ ರಾಗ. ಎಲ್ಲಿ ನೋಡಿದ್ರೂ ನೀರಿಲ್ಲ ನೀರಿಲ್ಲ..ಇನ್ನು ಸಾಮಾನ್ಯವಾಗಿ ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ನೀರಿಗೆ ಆಗೋ ಜಗಳಕ್ಕೆ ಅಂತ್ಯ ಯಾವಾಗ ಎಂದು ಕಾಯುವಂತಾಗಿದೆ. ನಮಗೆ ಬರಬೇಕಾದ ನೀರನ್ನು ಕರ್ನಾಟಕ ಬಿಡುತ್ತಿಲ್ಲ ಅನ್ನೋದು ತಮಿಳುನಾಡಿನ ಗೋಳಾದ್ರೆ, ನಮ್ಮ ರೈತರಿಗೇ ನೀರಿಲ್ಲ, ನಿಮಗೆ ಎಲ್ಲಿಂದ ನೀರು ಬಿಡಬೇಕು ಅನ್ನುವುದು ನಮ್ಮವರ ಚಿಂತೆಯಾಗಿದೆ.
ಆದರೆ ಈಗ ತಮಿಳುನಾಡಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದರೆ ತಪ್ಪಾಗಲ್ಲ. ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಒಬ್ಬ ಎಎಎಸ್ ಅಧಿಕಾರಿಯ ಚಾಕಾಣಕ್ಷ ನಿರ್ಧಾರದಿಂದ. ಹೌದು ಅವರೇ ಪ್ರತಾಪ್ ಮುರುಗನ್. ಇವರು 1,200 ಕೆಟ್ಟು ಹೋದ ಬೋರ್‌ವೆಲ್‌ಗಳನ್ನು ಮಳೆನೀರು ಕೊಯ್ಲು ಘಟಕಗಳಾಗಿ ಬದಲಾಯಿಸಿದ್ದಾರೆ. ಸಾಮಾನ್ಯವಾಗಿ ಬೋರ್‌ವೆಲ್‌ನಲ್ಲಿ ನೀರಿಲ್ಲ, ಅದಿನ್ನು ಯಾವುದಕ್ಕೂ ಪ್ರಯೋಜನಕ್ಕೆ ಬರೋದಿಲ್ಲ ಎಂದಾದಾಗ ಅದನ್ನು ಮುಚ್ಚಿ ಬಿಡುವವರೇ ಹೆಚ್ಚು. ಆದ್ರೆ, ಇಲ್ಲಿ ಈ ಬೋರ್‌ವೆಲ್‌ಗಳನ್ನೇ ಮಳೆ ನೀರು ಕೊಯ್ಲು ಮಾಡೋದಕ್ಕೆ ಬಳಸಲಾಗಿದೆ. ಇದರಿಂದ ಅಂತರ್ಜಲದ ಮಟ್ಟ 5 ರಿಂದ 10 ಅಡಿಗಳಷ್ಟು ಹೆಚ್ಚಾಗಿದೆಯಂತೆ. ನಟ ಆರ್ ಮಾಧವನ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದಾರೆ.

ಕೃಷಿ ಕುಟುಂಬದ ಐಎಎಸ್ ಅಧಿಕಾರಿ
ಐಎಎಸ್ ಅಧಿಕಾರಿ ಪ್ರತಾಪ್ ಮುರುಗನ್ ವಿರುಧುನಗರದ ಕೃಷಿ ಕುಟುಂಬದಿಂದ ಬಂದವರು. ಹಾಗಾಗಿ ಇವರಿಗೆ ಒಂದೊಂದು ಹನಿ ನೀರಿನ ತಾಕತ್ತು ಗೊತ್ತು. ನೀರನ್ನು ಮಿತವಾಗಿ ಬಳಸುವುದು, ನಮಗಾಗಿ ಮಾತ್ರವಲ್ಲ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದರ ಮಹತ್ವ ಇವರಿಗೆ ಚೆನ್ನಾಗಿಯೇ ಗೊತ್ತಿದೆ. ದಿ ಬೆಟರ್ ಇಂಡಿಯಾ ವರದಿಯ ಪ್ರಕಾರ, ಅವರ ಮನೆಯ ಪ್ರತಿಯೊಬ್ಬರೂ ನೀರನ್ನು ಎಚ್ಚರಿಕೆಯಿಂದ ಬಳಸ್ತಾ ಇದ್ರು. ಸಣ್ಣವರಾಗಿದ್ದಾಗಲೇ ಸಮಾಜಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊತ್ತುಕೊಂಡು ಕಿಲೋ ಮೀಟರ್‌ಗಟ್ಟಲೆ ಸೈಕಲ್ ತುಳಿದು ಶಾಲೆಗೆ ಹೋಗುತ್ತಿದ್ದರು.
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಪ್ರತಾಪ್ ಮುರುಗನ್, ಹಳ್ಳಿಗಳಲ್ಲಿ ಕೊಳವೆಬಾವಿಗಳು ವಿಫಲವಾಗುತ್ತಿರುವುದನ್ನು ಹತ್ತಿರದಿಂದ ಗಮನಿಸಿದ್ದಾರೆ. ರೈತರು ನೀರಿಗಾಗಿ ಆಳವಾದ ಕೊಳವೆ ಬಾವಿಗಳನ್ನು ಕೊರೆಯುತ್ತಿದ್ದರು, ಆದರೆ ಅಲ್ಲಿ ನೀರಿಲ್ಲ ಎನ್ನುವಾಗ ಅವರ ಶ್ರಮ ವ್ಯರ್ಥವಾಗುತ್ತಿತ್ತು. ಪ್ರತಿ ಮಳೆಗಾಲದಲ್ಲಿ, ಒಣ ಭೂಮಿ ನೀರನ್ನು ಹೀರಿಕೊಳ್ಳುವ ಮೊದಲೇ ಸಾವಿರಾರು ಲೀಟರ್ ಮಳೆನೀರು ಚರಂಡಿಗಳು ನಾಲೆಗಳಿಗೆ ಹರಿತಾ ಇತ್ತು. ಈ ರೀತಿ ನೀರು ಯಾವುದಕ್ಕೂ ಸಿಗದೆ ವೇಸ್ಟ್ ಆಗುವುದನ್ನು ತಡೆಯುವುದಕ್ಕೆ ಪ್ರತಾಪ್ ಮುರುಗನ್ ಒಂದು ಪ್ಲಾನ್ ಮಾಡುತ್ತಾರೆ.
ಮಳೆನೀರು ಕೊಯ್ಲು ಘಟಕಗಳಾಗಿ ಮರುಬಳಕೆ
ತಿರುವಳ್ಳೂರಿನ ಪಾಳು ಬಿದ್ದ ಬೋರ್‌ವೆಲ್‌ಗಳನ್ನು ಹಾಗೆಯೇ ಬಿಡುವ ಬದಲು ಮಳೆ ನೀರು ಕೊಯ್ಲು ಮಾಡುವುದಕ್ಕೆ ಬಳಸ್ತಾರೆ. ಹೀಗೆ ಪ್ರತಾಪ್ ಅವರ ನಾಯಕತ್ವದಲ್ಲಿ, ಜಿಲ್ಲೆಯು 1,200 ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ಮಳೆನೀರು ಕೊಯ್ಲು ಘಟಕಗಳಾಗಿ ಮರುಬಳಕೆ ಮಾಡಲಾಯಿತು.
ಚರಂಡಿ ಮತ್ತು ಕಾಲುವೆಗಳ ಮೂಲಕ ಹರಿದು ಹೋಗುವ ನೀರನ್ನು ಈ ಬೋರ್‌ವೆಲ್‌ಗಳಿಗೆ ಹರಿಸಲಾಯಿತು. ಇದು ನೆಲದೊಳಗೆ ಆಳವಾಗಿ ಇಂಗಿ ಪಾಳು ಭೂಮಿ ಮತ್ತೆ ನೀರಿನ ಮೂಲವಾಗುವುದಕ್ಕೆ ಸಹಾಯವಾಯಿತು. ಇದಕ್ಕಾಗಿ ಅವರು ದೊಡ್ಡ ಮಟ್ಟದ ಹಣವನ್ನು ಖರ್ಚು ಮಾಡಲೇ ಇಲ್ಲ. ದುಬಾರಿ ಯಂತ್ರೋಪಕರಣಗಳನ್ನೂ ಬಳಸಿಲ್ಲ, ಅಣೆಕಟ್ಟು ಯೋಜನೆಗಳನ್ನೂ ಪ್ರಾರಂಭಿಸಿಲ್ಲ. ಕಡಿಬದಲಿಗೆ ಕಡಿಮೆ ಖರ್ಚಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಕೈ ಹಾಕಲಾಯಿತು.
5 ರಿಂದ 10 ಅಡಿ ನೀರು ಏರಿಕೆ
ಇದಾದ ನಂತರ ಮೊದಲ ಮಳೆಯಲ್ಲಿಯೇ ಇದರ ಪರಿಣಾಮವು ಸ್ಪಷ್ಟವಾಗಿ ಕಾಣಿಸಿದೆ. ವರದಿಗಳ ಪ್ರಕಾರ, ತಿರುವಲ್ಲೂರಿನ ಹಲವಾರು ಭಾಗಗಳಲ್ಲಿ ಅಂತರ್ಜಲ ಮಟ್ಟವು 5 ರಿಂದ 10 ಅಡಿಗಳಷ್ಟು ಹೆಚ್ಚಾಗಿದೆ. ವರ್ಷಗಳಿಂದ ಒಣಗಿದ್ದ ಬಾವಿಗಳಲ್ಲಿ ಮತ್ತೆ ನೀರು ಸಂಗ್ರಹವಾಗಿದೆ. ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದ ಹಳ್ಳಿಗಳಲ್ಲಿ ಕೈ ಪಂಪ್‌ಗಳು ಕೆಲಸ ಮಾಡುವುದಕ್ಕೆ ಶುರು ಮಾಡಿದೆ.
ಇದೀಗ ತಮಿಳುನಾಡಿನಂತೆ ನಮ್ಮ ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಲ್ಲಿ ಯಾಕೆ ಈ ರೀತಿ ಮಾಡಬಾರದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೆಚ್ಚು ಹಣ ಖರ್ಚು ಮಾಡದೇ ಮಳೆ ಕುಯ್ಲು ಆರಂಭಿಸಿ ಮಾಡಿದ ಕೆಲಸ ಬಹುದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬಹುದು. ಹೀಗಿರುವಾಗ ಇದನ್ನು ನಮ್ಮಲ್ಲೂ ಜಾರಿಗೆ ತರಬಹುದಲ್ಲ ಎನ್ನುವ ಚರ್ಚೆ ಶುರುವಾಗಿದೆ.


Click it and Unblock the Notifications
