ಕರ್ನಾಟಕ ಪಿಎಫ್‌ಎಆರ್ ನೀತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್: ಬೆಂಗಳೂರು ಸಮಸ್ಯೆ ಬಗ್ಗೆ ಕಳವಳ
ನವದೆಹಲಿ: ರಾಜಧಾನಿ ಬೆಂಗಳೂರಿನ ನಾಗರಿಕ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆಯಲ್ಲಿ ಪ್ರಸ್ತಾಪವಾಗಿದೆ. ಸಣ್ಣ ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ನಿರ್ಮಾಣ ಉದ್ದೇಶಗಳಿಗಾಗಿ ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ (PFAR)ಕ್ಕೆ ಅನುಮತಿಸಿದ ಸರ್ಕಾರವು ಇದೀಗ ಉತ್ತರಿಸಬೇಕಿದೆ.
ಬೆಂಗಳೂರಿನಲ್ಲಿ ಅನೇಕ ಕಿರಿದಾದ ಅಂದರೆ ಒಂಬತ್ತು ಮೀಟರ್ ಅಗಲ ರಸ್ತೆಗಳಲ್ಲಿ ಬಹುಮಹಡಿ ನಿರ್ಮಿಸಲಾಗಿದೆ. ಇಷ್ಟು ಅಗಲದ ರಸ್ತೆಯಲ್ಲಿ ಇಷ್ಟು ದೊಡ್ಡ ಮನೆಗಳು ತಲೆ ಎತ್ತಿವೆ ಅಂದರೆ ಇದು ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ (PFAR)ಕ್ಕಿಂತ ಹೆಚ್ಚಿನದ್ದಾಗಿ. ಇದಕ್ಕೆ ಸರ್ಕಾರ ಹೇಗೆ ಅನುಮತಿ ನೀಡಿತು ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ. ಇಂತಿಷ್ಟು ರಸ್ತೆ, ನಿವೇಶನದಲ್ಲಿ ನಿರ್ಮಿಸಬಹುದಾದ ಕಟ್ಟಡಕ್ಕೆ ನೀಡಿರುವ ಅನುಮತಿಗಿಂತ ಇದು ಸರ್ಕಾರ ಕೊಟ್ಟಿರುವ ಅನುಮತಿ ಅಧಿಕ ಎಂದು ತಿಳಿಸಿದೆ.

ಈಗಾಗಲೇ ಬೆಂಗಳೂರು ಟೆಕ್ ಸಿಟಿಯಾಗಿ, ಐಟಿ ಕೇಂದ್ರವಾಗಿ ಬೆಳೆದಿದೆ. ಉದ್ಯಾನ ನಗರಿಯಲ್ಲಿ ನಾಗರಿಕ ಸಮಸ್ಯೆಗಳು ಹೆಚ್ಚಿವೆ. ಅಂಥದರಲ್ಲಿ ಪಿಎಫ್‌ಎಆರ್ ಅನುಮತಿಸುವ ಸರ್ಕಾರ ನಿರ್ಧಾರವು ಚಿಕ್ಕ ರಸ್ತೆಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಈ ರೀತಿ ಆದಲ್ಲಿ ನಾಗರಿಕ ಸಮಸ್ಯೆಗಳು ಉಲ್ಬಣಿಸಬಹುದು. ಪರಿಸ್ಥಿತಿ ಮತ್ತಷ್ಟು ಹದಗೆಡಬಹುದೆಂದು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕಿರಿದಾದ ಪ್ರದೇಶಗಳಲ್ಲೂ ಹೆಚ್ಚು ಹಣ ಪಾವತಿಸಿ ಪಿಎಫ್‌ಎಆರ್‌ಗೆ ಅನುಮತಿ ಪಡೆಯುವ ಬಿಲ್ಡರ್‌ಗಳು ಕಟ್ಟಡ ಕಟ್ಟಿ ಫ್ಲಾಟ್ ಖರೀದಿದಾರರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಸ್ಥಳೀಯ ನಾಗರಿಕ ಮೂಲ ಸೌಲಭ್ಯಗಳ ಮೇಲೆ ತೊಂದರೆ ಆಗುತ್ತದೆ. ಹೊಸದಾಗಿ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಅಧಿಕ ಎಫ್‌ಎಆರ್ ಅನುಮತಿ ಒದಗಿಸಬಹುದು. ಆದರೆ ಈಗಾಗಲೇ ಇರುವ ನಗರದ ವಸತಿ ಪ್ರದೇಶಗಳಲ್ಲಿ ಈ ರೀತಿ ಅನುಮತಿ ನೀಡಿದರೆ ನಾಗರಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಕಿರಿದಾದ ರಸ್ತೆಗಳೂ, ಸಣ್ಣ ಸಣ್ಣ ವಸತಿ ಪ್ರದೇಶಗಳ ಜನರು ನಿತ್ಯ ತೊಂದರೆ ಅನುಭವಿಸಬೇಕಾಗುತ್ತದೆ.
ರಾಜ್ಯ ಸರ್ಕಾರ ಇಂತಹ ಅನುಮತಿಗಳ ಮೂಲಕ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಮತ್ತು ಬಿಲ್ಡರ್‌ಗಳಿಗೆ ಲಾಭವಾಗದಂತೆ ಮಾಡದೇ ನಿವಾಸಿಗಳ ಹಿತಾಸಕ್ತಿಗಳ ಬಗ್ಗೆ, ಜನಸಾಮಾನ್ಯರ ಕುರಿತು ಯೋಚನೆ ಮಾಡಬೇಕು. ನಿವಾಸಿಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಪ್ರತಿ ಬಾರಿಯೂ ಬೀದಿಗೆ ಬಂದು ಪ್ರತಿಭಟಿಸಬೇಕೇ? ಈ ಬಗ್ಗೆ ಸರ್ಕಾರ ಯೋಚಿಸಬೇಕಲ್ಲವೇ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.
ಪಿಎಫ್‌ಎಆರ್ ಎಂದರೇನು?
ಒಬ್ಬ ಕಟ್ಟಡ ನಿರ್ಮಾಣ ಮಾಡುವವರು ಇಲ್ಲವೇ ಮಾಲೀಕರು ಸರ್ಕಾರ ನಿಗದಿಪಡಿಸಿದ ಸಾಮಾನ್ಯ ಎಫ್‌ಎಆರ್ (Floor Area Ratio) ಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ಕಟ್ಟಲು ಬಯಸಿದರೆ ಅವರು ಸರ್ಕಾರಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆಗ ಅದು PFAR ಎಂದು ಕರೆಯಲ್ಪಡುತ್ತದೆ.
ಇದು ಒಂದು ನಿವೇಶನದ ವಿಸ್ತೀರ್ಣ ಮತ್ತು ಆ ನಿವೇಶನದ ಮೇಲೆ ನಿರ್ಮಿಸಬಹುದಾದ ಒಟ್ಟು ಕಟ್ಟಡದ ವಿಸ್ತೀರ್ಣದ ನಡುವಿನ ಅನುಪಾತವನ್ನು ಎಫ್‌ಎಆರ್ (Floor Area Ratio) ಎಂದು ಕರೆಯಲಾಗುತ್ತದೆ. ರಾಜ್ಯ ಸರ್ಕಾರ ಪಿಎಫ್‌ಎಆರ್ ಅನುಮತಿಯನ್ನು ಸಣ್ಣ ಸಣ್ಣ ವಸತಿ ಪ್ರದೇಶಗಳಲ್ಲಿ ನೀಡಿದ್ದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.












Click it and Unblock the Notifications