Sudan War: ಭಾರತೀಯರ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ: 300ಕ್ಕೂ ಹೆಚ್ಚು ಜನ ಸಾವು
ನವದೆಹಲಿ, ಏಪ್ರಿಲ್ 21: ಸುಡಾನ್‌ನಲ್ಲಿ ಅಂತರ್ಯುದ್ಧ ಮುಂದುವರೆದಿದ್ದು ನೂರಾರು ಮಂದಿ ಮೃತಪಟ್ಟಿದ್ದಾರೆ. ಅಲ್ಲಿಯವರ ಪರಿಸ್ಥಿತಿ ಚಿಂತಾಜನಕವಾಗಿದೆ. ಭಾರತೀಯರು ಯುದ್ಧ ಪ್ರದೇಶದಲ್ಲಿ ಸಿಲುಕಿದ್ದು, ಅವರ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನೃತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ನಡೆದ ಹೋರಾಟದಲ್ಲಿ 300 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಊಟ ನೀರು ಸಿಗದ ಪರಿಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ಭದ್ರತೆ ಒದಗಿಸುವ ಸಲುವಾಗಿ ನಡೆದ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಪಾಲ್ಗೊಂಡಿದ್ದರು.
PM Narendra Modi chairs a high-level meeting to review the situation related to Indians in Sudan. pic.twitter.com/gkklP9oj0U
— ANI (@ANI) April 21, 2023
ಮಿಲಿಟರಿ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಅಲ್ಲಿ ಸಿಲುಕಿಕೊಂಡವರ ಭಾರತೀಯರ ಸಂಖ್ಯೆ ಅನಿರ್ದಿಷ್ಟವಾಗಿದ್ದು, ಎಷ್ಟು ಜನ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಸೇವೆ-ಅರೆಸೇನಾ ಪಡೆಗಳ ಕಾದಾಟಾ, ಗುಂಡಿನ ಸುರಿಮಳೆ ಹೆಚ್ಚಾಗುತ್ತಿದ್ದಂತೆ ಭಯಭೀತರಾದ ಸಾವಿರಾರು ಜನರು ಸುಡಾನ್‌ನ ರಾಜಧಾನಿ ಖಾರ್ಟೂಮ್ ದಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡವರ ಸಂಖ್ಯೆ 2600ಕ್ಕೆ ಏರಿಕೆ
ಸುಡಾನ್ ಅಂತರ್ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದ್ದು, ಒಬ್ಬ ಭಾರತೀಯ ಸೇರಿದಂತೆ ಸುಮಾರು 350 ಕ್ಕೂ ಹೆಚ್ಚು ಜನರ ಸಾವಾಗಿದೆ. 2600ಕ್ಕೂ ಹೆಚ್ಚು ನಾಗರಿಕರಿಗೆ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಈ ಎಲ್ಲ ಬೆಳವಣಿಗೆ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರೊಂದಿಗೆ ಚರ್ಚಿಸಿದ್ದಾರೆ.
ಈ ಯುದ್ಧದಿಂದಾಗಿ ಸುಡಾನ್ ನಲ್ಲಿ ಜನರಿಗೆ ಆಹಾರ ಸಿಗುತ್ತಿಲ್ಲ. ಕುಡಿಯಲು ನೀರು ಸರಬರಾಜು ಆಗುತ್ತಿಲ್ಲ. ಆಹಾರ ಕೊರತೆ ತಲೆದೂರಿದ್ದು, ಜನರು ಹಸಿವಿನಿಂದ ನರಳುವಂತಾಗಿದೆ. ಈ ಎಲ್ಲದರ ಮಧ್ಯೆ ಎರಡು ಸೇನಾ ಪಡೆಗಳ ಸಂಘರ್ಷ ಶಮನ ಮಾಡಿ ಕದನ ವಿರಾಮ ಸ್ಥಾಪಿಸಲು ವಿಶ್ವಸಂಸ್ಥೆ ಗಂಭೀರ ಪ್ರಯತ್ನ ನಡೆಸಿದೆ ಎಂದು ಸಭೆಯಲ್ಲಿ ಜೈಶಂಕರ್ ಹೇಳಿದರು.

ಕದನ ವಿರಾಮ ಅಗತ್ಯ
ಒಂದು ವೇಳೆ ಕದನ ವಿರಾಮ ಆದರೆ ಮಾತ್ರವೇ ಅಲ್ಲಿ ಸಿಲುಕಿರುವವರನ್ನು ಬೇರೆಡೆಗೆ ಸ್ಥಳಾಂತರಿಸಲು ಇಲ್ಲವೇ ಭಾರತೀಯರನ್ನು ಮರಳ ಕರೆತರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಯುದ್ಧಪರಿಸ್ಥಿತಿಯಲ್ಲಿ ಅಲ್ಲಿಂದ ಪಲಾಯನ ಸುರಕ್ಷಿತವಲ್ಲ ಎಂದು ಸಭೆಯಲ್ಲಿ ಚರ್ಚೆ ಆಗಿದೆ.
ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರೊಂದಿಗೆ ನಮ್ಮ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ದೆಹಲಿಯಲ್ಲಿರುವ ನಮ್ಮ ತಂಡ ಸುಡಾನ್‌ನಲ್ಲಿನ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅಲ್ಲಿರುವವರಿಗೆ ಇಲ್ಲಿದ್ದುಕೊಂಡೆ ಅಗತ್ಯ ಸಲಹೆ ಸೂಚನೆ ಕೊಡಲಾಗಿದೆ ಎಂದು ಜೈಶಂಕರ್ ಸಭೆಗೆ ತಿಳಿಸಿದರು. ಅಲ್ಲಿಯವರ ಕಷ್ಟ ಏನೆಂಬುದು ತಿಳಿದಿದೆ. ಕರೆತರುವ ಪ್ರಯತ್ನ ನಡೆಯುತ್ತಿದ್ದು, ಅಲ್ಲಿವರೆಗೆ ಶಾಂತವಾಗಿರಬೇಕು. ಅನಗತ್ಯ ಅಪಾಯತಂದುಕೊಳ್ಳಬೇಡಿ ಎಂದರು.












Click it and Unblock the Notifications