ಸಂಸದ ಅಸಾದುದ್ದೀನ್ ಓವೈಸಿ ಅವರ ನಿವಾಸದ ಮೇಲೆ ಕಲ್ಲು ತೂರಾಟ
ಇದೇ ಮಾದರಿಯಲ್ಲಿ 2014ರಿಂದಲೂ ಕಲ್ಲೂ ತೂರಾಟ ನಡೆದಿದ್ದು, ಇದು 4ನೇ ಘಟನೆಯಾಗಿದೆ ಎಂದು ಓವೈಸಿ ತಿಳಿಸಿದ್ದಾರೆ.
ನವದೆಹಲಿ, ಫೆಬ್ರವರಿ 20: ಎಐಎಂಐಎಂ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಅವರ ನವದೆಹಲಿಯಲ್ಲಿರುವ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲೂ ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಮಾದರಿಯಲ್ಲಿ 2014ರಿಂದಲೂ ಕಲ್ಲೂ ತೂರಾಟ ನಡೆದಿದ್ದು, ಇದು 4ನೇ ಘಟನೆಯಾಗಿದೆ ಎಂದು ಓವೈಸಿ ತಿಳಿಸಿದ್ದಾರೆ. ಘಟನೆ ನಡೆದಾಗ ಅಸಾದುದ್ದೀನ್ ಓವೈಸಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ನಡೆದಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014ರಿಂದ ಇದೇ ಮಾದರಿ ದಾಳಿ ನಡೆಯುತ್ತಿದ್ದು, ಇದು ನಾಲ್ಕನೇ ಘಟನೆಯಾಗಿದೆ. ಇಂದು ರಾತ್ರಿ, ನಾನು ಜೈಪುರದಿಂದ ಹಿಂತಿರುಗಿದ್ದೆ. ಆಗ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿಗಳು ಒಡೆದವು ಎಂದು ನನ್ನ ಮನೆಯ ಸಹಾಯಕರು ತಿಳಿಸಿದ್ದರು. ಕಿಡಿಗೇಡಿಗಳನ್ನು ತಕ್ಷಣವೇ ದೆಹಲಿ ಪೊಲೀಸರು ಹಿಡಿಯಬೇಕು ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

'ಹೈ ಸೆಕ್ಯುರಿಟಿ' ವಲಯ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಇದು ಸಂಭವಿಸಿರುವುದು ಕಳವಳಕಾರಿಯಾಗಿದೆ. ನಾನು ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಮತ್ತು ಅವರು ನನ್ನ ನಿವಾಸವನ್ನು ತಲುಪಿದ್ದಾರೆ ಎಂದು ಒವೈಸಿ ಹೇಳಿದ್ದಾರೆ. ಸಂಸದ ಅಸಾದುದ್ದೀನ್ ಓವೈಸಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಸೋಮವಾರ ತನಿಖೆ ಆರಂಭಿಸಿದ್ದಾರೆ.
ಕಲ್ಲು ತೂರಾಟದ ಘಟನೆಯ ಹಿನ್ನೆಲೆಯಲ್ಲಿ ಓವೈಸಿ ಅವರ ನಂ. 34, ಅಶೋಕ ರಸ್ತೆಯ ನಿವಾಸದ ಹೊರಗೆ ದೆಹಲಿ ಪೊಲೀಸರ ಗಸ್ತು ವಾಹನವೂ ನಿಂತಿತ್ತು. "ಈ ಘಟನೆ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆ ನಡೆದಾಗ ಓವಾಸಿ ಅವರ ನಿವಾಸದಲ್ಲಿ ಇರಲಿಲ್ಲ. ಅವರ ಮನೆಯ ಹಿಂಭಾಗದ ಪ್ರವೇಶದ್ವಾರದಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಇಟ್ಟಿಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓವೈಸಿ ದೂರಿನ ಮೇರೆಗೆ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸ್ ತಂಡವು ಅವರ ನಿವಾಸಕ್ಕೆ ಭೇಟಿ ನೀಡಿ ದಾಳಿಯ ಸ್ಥಳವನ್ನು ಸಮೀಕ್ಷೆ ಮಾಡಿದೆ. ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಐಎಂಐಎಂ ಮುಖ್ಯಸ್ಥರು ನೀಡಿದ ದೂರಿನಲ್ಲಿ ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿಗಳನ್ನು ಹಾನಿಗೊಳಿಸಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications