ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ತಾಯಿ: ವೀರಪ್ಪ ಮೊಯ್ಲಿ
ಹೈದರಾಬಾದ್, ಡಿಸೆಂಬರ್ 10: ನಿರ್ಗಮಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆಯೂ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ವಹಿಸುವ ಜತೆಗೆ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸೋನಿಯಾ ನಾಯಕತ್ವ ಗುಣವನ್ನು ಹೊಗಳಿದ ಮೊಯ್ಲಿ, 2004 ಮತ್ತು 2009ರಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಲು ಅವರೇ ಕಾರಣ ಎಂದು ಹೇಳಿದ್ದಾರೆ.

"ಜನರನ್ನು ಒಟ್ಟಿಗೆ ಸೇರಿಸಿದ್ದು ಅವರ ಬಹುದೊಡ್ಡ ಕೆಲಸ," ಎಂದು ಮೊಯ್ಲಿ ಹೇಳಿದ್ದಾರೆ. ಅವರು ಅಧ್ಯಕ್ಷೆ ಅಲ್ಲದಿದ್ದರೂ ಪಕ್ಷದಲ್ಲಿ ನಿರ್ಣಾಯಕ ಜವಾಬ್ದಾರಿಯನ್ನು ಮುಂದೆಯೂ ನೋಡಿಕೊಳ್ಳಲಿದ್ದಾರೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆದ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಅವರ ಅವಧಿಯಲ್ಲಿ ಪಕ್ಷ ಹಲವು ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿದೆ. ಆರ್.ಟಿ.ಐ ಕಾಯಿದೆ, ನರೇಗಾ ಯೋಜನೆಯಂಥ ಪ್ರಮುಖ ಯೋಜನೆಗಳನ್ನು ಅವರ ಕಾಲದಲ್ಲಿ ಜಾರಿಗೆ ತರಲಾಯಿತು ಎಂದು ಮೊಯ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ಅವರನ್ನು ಯಾವತ್ತೂ ಪಕ್ಷದ ತಾಯಿಯ ರೀತಿ ನೋಡಲಾಗುತ್ತದೆ. ಅವರು ರಾಹುಲ್ ಗಾಂಧಿಗೆ ಮಾತ್ರ ತಾಯಿಯಲ್ಲ. ಕಾಂಗ್ರೆಸ್ ಪಕ್ಷಕ್ಕೂ ಅವರು ತಾಯಿ. ಅವರು ಕಾಂಗ್ರೆಸ್ ಪಕ್ಷದ ಸ್ಪೂರ್ಥಿಯಾಗಿ ಮುಂದೆಯೂ ಆರೈಕೆ ಮಾಡಲಿದ್ದಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ 4ರಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದು ಸದ್ಯದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.












Click it and Unblock the Notifications