Ram Mandir: ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ ಸೋನಿಯಾ ಗಾಂಧಿ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು, ಇದು ನಾಲ್ಕು ತಿಂಗಳೊಳಗೆ ಸಾರ್ವತ್ರಿಕ ಚುನಾವಣೆಗೆ ಮುನ್ನ ದೇಶದ ರಾಜಕೀಯ ವಲಯದ ಚರ್ಚಾ ವಿಚಾರವಾಗಿದೆ.

ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಈ ಮೊದಲು, ಸೋನಿಯಾ ಗಾಂಧಿ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ನಿಯೋಗವು ಭಾಗವಹಿಸುತ್ತದೆ ಎಂದು ಹೇಳಿದ್ದರು.
ಚರ್ಚೆಯ ಬಳಿಕ ತೀರ್ಮಾನ
ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ವಿಷಯದ ಬಗ್ಗೆ ಕಾಂಗ್ರೆಸ್‌ನ ನಿರ್ಧಾರವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಅದರ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳೊಂದಿಗೆ ಚರ್ಚೆ ಬಳಿಕ ತೀರ್ಮಾನ ಮಾಡಲಿದೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗದಿರುವುದು, ಬಿಜೆಪಿಗೆ ಚುನಾವಣಾ ಅಸ್ತ್ರವನ್ನು ನೀಡಲಿದೆ ಎಂದು ಕಾಂಗ್ರೆಸ್ ಭಾವಿಸಿದೆ. ಒಂದು ವೇಳೆ ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಹೋಗದಿದ್ದರೆ, ಅವರನ್ನು ಹಿಂದೂ ವಿರೋಧಿ ಎಂದು ಬಿಜೆಪಿ ಪ್ರಚಾರ ಮಾಡುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಆತಂಕಕ್ಕೆ ಕಾರಣವಾಗಿದೆ.
ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೆ, ನಿರ್ದಿಷ್ಟವಾಗಿ ಆಡಳಿತ ಪಕ್ಷದ ವಿರುದ್ಧ ಮೈತ್ರಿ ಮಾಡಿಕೊಂಡವರಿಗೆ ಆಹ್ವಾನಗಳು ಬಿಸಿ ತುಪ್ಪದಂತಾಗಿದೆ. ಎಲ್ಲಾ ರೀತಿಯಿಂದ ಅಳೆದು ತೂಗಿ ಸಾಧಕ ಬಾಧಕಗಳನ್ನು ಚರ್ಚಿಸಿ ನಂತರ ತೀರ್ಮಾನಿಸುವ ಸಾಧ್ಯತೆ ಇದೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮತ್ತು ಬಹು ರಾಜ್ಯಗಳ ಚುನಾವಣೆಗೆ ಮುಂಚಿತವಾಗಿ ಮುಸ್ಲಿಮರು ಮಾತ್ರವಲ್ಲದೆ ಅಲ್ಪಸಂಖ್ಯಾತ ಸಮುದಾಯಗಳು ಬೆಂಬಲ ನೀಡದಿರುವ ಆತಂಕ ಕೆಲವು ಪಕ್ಷಗಳಲ್ಲಿದೆ. ಹಾಜರಾದರೆ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳುವ ಭಯ ಒಂದು ಕಡೆಯಾದರೆ, ಹಾಜರಾಗದಿದ್ದರೆ ಬಿಜೆಪಿ ಇವುಗಳನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಅಪಾಯ ಮತ್ತೊಂದೆಡೆ ಇದೆ.
ಸಿಪಿಐಎಂ ಮತ್ತು ಸಿಪಿಐ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ಈ ವಾರದ ಆರಂಭದಲ್ಲಿ ಬೃಂದಾ ಕಾರಟ್ ಅವರು, ಬಿಜೆಪಿ "ಧರ್ಮವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತದೆ" ಎಂದು ಟೀಕಿಸಿದ್ದರು. ನಾವು ಹೋಗುವುದಿಲ್ಲ, ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ, ಆದರೆ ಅವರು ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದಾರೆ, ಇದು ಸರಿಯಲ್ಲ" ಎಂದು ಹೇಳಿದ್ದರು.












Click it and Unblock the Notifications