ಏಪ್ರಿಲ್ 14ರ ಬಳಿಕ ಮುಂದೇನು?; ರಾಜ್ಯಗಳ ನಿಲುವು ಹೀಗಿದೆ
ನವದೆಹಲಿ, ಏಪ್ರಿಲ್ 07: ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 14ರಂದು ಲಾಕ್ ಡೌನ್ ಅವಧಿ ಮುಗಿಯಲಿದೆ. 7 ರಾಜ್ಯಗಳು ಈಗಾಗಲೇ ಲಾಕ್ ಡೌನ್ ಮುಗಿದ ಮೇಲೆ ಎಲ್ಲಾ ಸೇವೆಗಳನ್ನು ಆರಂಭಿಸುವ ತರಾತುರಿಯಲ್ಲಿವೆ.
Recommended Video
ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ ಮುಂತಾದ ರಾಜ್ಯಗಳು ಲಾಕ್ ಡೌನ್ ಅವಧಿ ಮುಗಿದ ಮೇಲೆಯೂ ಕೆಲವು ನಿರ್ಬಂಧಗಳನ್ನು ಮುಂದುವರೆಸುವ ಸುಳಿವನ್ನು ನೀಡಿವೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಅಂದರೆ ಪ್ರಸ್ತುತ 748 ಕೊರೊನಾ ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ಪುಣೆ ಭಾಗದಲ್ಲಿ ಲಾಕ್ ಡೌನ್ ಮುಂದುವರೆಸಲು ರಾಜ್ಯ ಬಯಸಿದೆ. ರಾಜ್ಯದ ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ತೆರವಾಗುವ ನಿರೀಕ್ಷೆ ಇದೆ.

ಅಸ್ಸಾಂ ರಾಜ್ಯದಲ್ಲಿ ಇದುವರೆಗೂ 26 ಪ್ರಕರಣಗಳು ಮಾತ್ರ ದಾಖಲಾಗಿವೆ. ಲಾಕ್ ಡೌನ್ ಅವಧಿ ಮುಗಿದ ಬಳಿಕ ರಾಜ್ಯಕ್ಕೆ ಆಗಮಿಸಲು ಬಯಸುವವರಿಗೆ ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ ಆರಂಭಿಸಲಾಗಿದೆ.
ಉತ್ತರ ಪ್ರದೇಶ ರಾಜ್ಯ ಇನ್ನೂ ಲಾಕ್ ಡೌನ್ ತೆರವು ವಿಚಾರದಲ್ಲಿ ಗೊಂದಲ್ಲಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದೊಳಗಿನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜಸ್ಥಾನ ಹೆಚ್ಚು ಪ್ರಕರಣಗಳಿರುವ ಪ್ರದೇಶ ಬಿಟ್ಟು ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಳಿಸಲು ಮುಂದಾಗಿದೆ. ತೆಲಂಗಾಣದಲ್ಲಿ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆದಿದೆ ಎಂಬ ವಿಚಾರ ಸೋಮವಾರ ಬಹಿರಂಗವಾಗಿತ್ತು.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಲಾಕ್ ಡೌನ್ ಕುರಿತು ಮಾತನಾಡಿದ್ದಾರೆ. "ಮುಂಬೈ ಮತ್ತು ಪುಣೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಸಂಪೂರ್ಣವಾಗಿ ತೆಗೆಯಲಾಗುತ್ತದೆ ಎಂದು ಯಾರೂ ಊಹಿಸಬೇಡಿ" ಎಂದು ಹೇಳಿದ್ದಾರೆ.












Click it and Unblock the Notifications