Shobha Yatra: ಹಿಂದೂ ಮಹಾಪಂಚಾಯತ್ ಮಹಾ ನಿರ್ಧಾರ ಪ್ರಕಟ!
ಪಲ್ವಾಲ್: ಇತ್ತೀಚೆಗೆ ಕೋಮು ದ್ವೇಷದ ಬೆಂಕಿಯಲ್ಲಿ ಬೆಂದಿರುವ ಹರಿಯಾಣದಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ವಿಶ್ವ ಹಿಂದೂ ಪರಿಷತ್‌ನ ಮಹತ್ವದ ಯಾತ್ರೆಯನ್ನು ಪುನರ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್ 28ರಿಂದ ಶೋಭಾ ಯಾತ್ರೆ ಪುನಾರಂಭದ ಬಗ್ಗೆ ಮಹತ್ವದ ಆದೇಶವನ್ನು ಇಂದು ಹಿಂದೂ ಸಂಘಟನೆಗಳ ಮಹಾಪಂಚಾಯತ್‌ನಲ್ಲಿ ಘೋಷಿಸಲಾಗಿದೆ.
ಹೌದು ಹರಿಯಾಣದಲ್ಲಿ ಹೊತ್ತಿದ್ದ ಕೋಮು ದ್ವೇಷದ ಕಿಚ್ಚು ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಹೀಗಾಗಿ ಪರಿಸ್ಥಿತಿ ಹಿಡಿತಕ್ಕೆ ತರುವಲ್ಲಿ ಭದ್ರತಾ ಪಡೆಗಳು ಕೂಡ ಪರದಾಡಿ ಹೋದವು. ಇಷ್ಟೆಲ್ಲಾ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಮಹತ್ವದ ಸಭೆಯನ್ನು ಇಂದು ಹಿಂದೂ ಸಂಘಟನೆಗಳು ನಡೆಸಿವೆ. ಇಂದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಪಲ್ವಾಲ್, ಗುರುಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಹಾಗಾದರೆ ಈ ಮಹಾಪಂಚಾಯತ್ ಕೈಗೊಂಡ ಮಹತ್ವದ ನಿರ್ಧಾರಗಳು ಯಾವುವು? ಬನ್ನಿ ತಿಳಿಯೋಣ.

ಗಲಭೆ ತನಿಖೆ ಎನ್‌ಐಎ ಹೆಗಲಿಗೆ?
ಹರಿಯಾಣದ ಪಲ್ವಾಲ್‌ನಲ್ಲಿ ಇಂದು ಹಿಂದೂ ಸಂಘಟನೆಗಳು ಮಹಾಪಂಚಾಯತ್ ಕರೆದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹಾಗೇ ಈ ಮಹಾಪಂಚಾಯತ್‌ನಲ್ಲಿ ಸುತ್ತಮುತ್ತಲ ಭಾಗದ ಜನರು ಸೇರಿದ್ದರು. ಪಂಚಾಯತ್‌ನಲ್ಲಿ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಈ ಪೈಕಿ ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಏಕೆಂದರೆ ಹರಿಯಾಣ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸುವಷ್ಟು ಸಾಮರ್ಥ್ಯವಿಲ್ಲ ಎಂದು ಪಂಚಾಯತ್ ಹೇಳಿದೆ ಎನ್ನಲಾಗಿದೆ.
ಶೋಭಾ ಯಾತ್ರೆ ಬಗ್ಗೆ ಪ್ರಮುಖ ನಿರ್ಣಯ
ಇನ್ನು ಇದೇ ವೇಳೆ ಮತ್ತೊಂದು ಪ್ರಮುಖ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅದೇನಂದ್ರೆ ಹಿಂಸಾಚಾರದ ಕಾರಣ ಅಪೂರ್ಣವಾಗಿ ಉಳಿದಿರುವ ಶೋಭಾ ಯಾತ್ರೆ ಮತ್ತೆ ಶುರುವಾಗಲಿದೆ. ಆಗಸ್ಟ್ 28 ರಂದು ಪುನರಾರಂಭಗೊಂಡು ತನ್ನ ಗುರಿಯನ್ನು ಯಾತ್ರೆ ತಲುಪಲಿದೆ ಎಂದು ಈ ವೇಳೆ ಮಹತ್ವದ ಘೋಷಣೆ ಹೊರಡಿಸಲಾಗಿದೆ. ಹಾಗೇ ನುಹ್ & ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸ ಇರುವ ಹಿಂದೂಗಳಿಗೆ ಆದ್ಯತೆ ಮೇಲೆ ಗನ್ ಲೈಸೆನ್ಸ್ ನೀಡುವಂತೆ ಆಗ್ರಹಿಸಲಾಗಿದೆ. ಹಿಂದೂಗಳು ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದರೆ ಆದ್ಯತೆ ಮೇರೆಗೆ ನೀಡಲು ಇದೇ ವೇಳೆ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.

ಹಾಗೇ ಹರಿಯಾಣದಲ್ಲಿ ವಿವಿಧ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ನಂತರ ಬಂಧಿತರಾದ ಅಮಾಯಕರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ನುಹ್‌ನ ಜಿಲ್ಲಾ ಕೇಂದ್ರವನ್ನು ವಿಸರ್ಜಿಸಲು ಒತ್ತಾಯಿಸಲಾಗಿದ್ದು ಮತ್ತು ಅದನ್ನು ಪಕ್ಕದ ಜಿಲ್ಲೆಗಳಿಗೆ ಸೇರಿಸುವಂತೆ ಆಗ್ರಹಿಸಲಾಗಿದೆ. ಇದರ ಜೊತೆಗೆ ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ. ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಹಾಗೂ ಗಲಭೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ನೀಡಲು ಆಗ್ರಹಿಸಲಾಗಿದೆ.












Click it and Unblock the Notifications