ಶ್ರೀಶೈಲಂ ಶಿವಲಿಂಗ ಭಿನ್ನ, ಭಕ್ತರಲ್ಲಿ ಆತಂಕ
ಹೈದರಾಬಾದ್, ಸೆ.26: ವಿಶ್ವಖ್ಯಾತ ಹಿಂದೂ ಧಾರ್ಮಿಕ ಕ್ಷೇತ್ರ, ಶೈವ ಪಂಚಪೀಠಗಳಲ್ಲಿ ಒಂದೆನಿಸಿರುವ ಶ್ರೀಶೈಲಂನ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿಯ ಮೂಲ ಶಿವಲಿಂಗಂ ಭಿನ್ನವಾಗಿರುವ ಸುದ್ದಿ ಭಕ್ತರಲ್ಲಿ ಆತಂಕ ಮೂಡಿಸಿದೆ.
ದಿನನಿತ್ಯ ದೇಶ-ವಿದೇಶಗಳಿಂದ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಅಭಿಷೇಕ ಸಲ್ಲಿಸುತ್ತಾರೆ. ಚಿನ್ನದ ಲೇಪದಲ್ಲಿರುವ ಭ್ರಮಾರಾಂಭ ಮಲ್ಲಿಕಾರ್ಜುನ ಸ್ವಾಮಿಯ ಶಿವಲಿಂಗಂ ಮೂಲ ಸ್ವರೂಪ ಬದಲಾಗಿರುವುದರಿಂದ ಅಭಿಷೇಕವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಪ್ರತಿನಿತ್ಯ ಮಲ್ಲಿಕಾರ್ಜುನ ಸ್ವಾಮಿಯ ಶಿವಲಿಂಗಂಗೆ ಪಂಚಾಮೃತ ಅಭಿಷೇಕ ಸಲ್ಲಿಸಲಾಗುತ್ತದೆ. ಇದಕ್ಕೆ ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ, ಎಳನೀರು ಸೇರಿದಂತೆ ವಿವಿಧ ರೀತಿಯಲ್ಲಿ ಸ್ವಾಮಿಗೆ ಅಭಿಷೇಕ ಸಲ್ಲಿಸಲಾಗುತ್ತದೆ.

ಪ್ರತಿನಿತ್ಯ ಶಿವಲಿಂಗಂಗೆ ಒಂದು ಸಾವಿರ ಲೀಟರ್ ಹಾಲು, ಒಂದು ಸಾವಿರ ಕೆಜಿ ತುಪ್ಪ, ಅಷ್ಟೇ ಪ್ರಮಾಣದ ಮೊಸರು, ಹಾಲನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿ ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ.
ಚಿನ್ನದ ಲೇಪದಲ್ಲಿರುವ ಶಿವಲಿಂಗಂ ಸ್ವಾಮಿಗೆ ಪ್ರತಿನಿತ್ಯ ಅಭಿಷೇಕ ಸಲ್ಲಿಸುತ್ತಿರುವುದರಿಂದ ಅದರ ಮೂಲ ಸ್ವರೂಪವೇ ಬದಲಾಗಿದೆ ಎಂದು ಆಡಳಿತಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ತಾತ್ಕಾಲಿಕವಾಗಿ ಅಭಿಷೇಕವನ್ನು ನಿಲ್ಲಿಸಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ಮಂಡಳಿ ಕೋರಿಕೊಂಡಿದೆ.
ಅಪಾಯದ ಸೂಚನೆಯೇ?: ಚಿನ್ನದ ಲೇಪದಲ್ಲಿರುವ ಸ್ವರೂಪ ಬದಲಾಗುತ್ತಿರುವುದು ಅಪಾಯದ ಸಂಕೇತ ಎಂದು ಕೆಲವು ಪಂಡಿತರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಪಂಡಿತರ ಪ್ರಕಾರ, ಮೂರ್ತಿಗೆ ಹಾಲು, ತುಪ್ಪ, ಮೊಸರು, ಎಳನೀರು, ಜಲಾಭಿಷೇಕ ಮಾಡುವುದರಿಂದ ಮೂಲ ಸ್ವರೂಪದಲ್ಲಿ ಬದಲಾಗಿದೆ. ಇದು ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ.
ಇದೀಗ ಮೂರ್ತಿ ಸ್ವರೂಪ ಬದಲಾಗಿರುವುದರಿಂದ ಆಡಳಿತ ಮಂಡಳಿ ಮತ್ತು ಪಂಡಿತರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಿದ್ದಾರೆ. ಮೂಲ ಸ್ವರೂಪವನ್ನೇ ಬದಲಾಯಿಸುವುದು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬುದು ಕೆಲವರ ವಾದವಾಗಿದೆ. ಹೀಗಾಗಿ ಇದರ ಬಗ್ಗೆ ಸಾಕಷ್ಟು ಆಲೋಚಿಸಿ ತೀರ್ಮಾನ ಕೈಗೊಳ್ಳಲು ಮಂಡಳಿ ಮುಂದಾಗಿದೆ.
ಆದರೆ, ಮೂಲ ಶಿವಲಿಂಗವನ್ನು ಸರಿಪಡಿಸುವುದು ಕಷ್ಟಕರವಾಗಿದೆ. ಮಡಿಮೈಲಿಗೆ ನೇಮ ನಿಷ್ಠೆ ಇಲ್ಲದವರು ಲಿಂಗಕ್ಕೆ ಕೈ ಹಾಕಿ ಹೆಚ್ಚು ಕಮ್ಮಿ ಮಾಡಿದರೆ ಶಿವನ ಪಾದ ಸೇರಬೇಕಾಗುತ್ತದೆ. ಈ ಹಿಂದೆ ಶಿವಲಿಂಗವನ್ನು ಹಾಳು ಮಾಡಲು ಯತ್ನಿಸಿದವರೊಬ್ಬ ಅಲ್ಲೇ ಕುಸಿದು ಸಾವನ್ನಪ್ಪಿದ್ದ ಎಂಬುದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ ಎಂದು ದೇಗುಲದ ಪ್ರಧಾನ ಅರ್ಚಕರು ಹೇಳಿದ್ದಾರೆ.












Click it and Unblock the Notifications