IMD Weather Forecast: 05 ದಿನ ಈ ಭಾಗಗಳಲ್ಲಿ ದಟ್ಟ ಮಂಜು, ಭಾರೀ ಚಳಿ ಮುನ್ಸೂಚನೆ, ಎಲ್ಲೆಲ್ಲಿ?
India Cold Wave Forecast: ಕರ್ನಾಟಕದ ಉತ್ತರ ಒಳನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಶೀತದ ಅಲೆಯ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಬೆಳಗ್ಗೆ ನಿರಂತರವಾಗಿ ದಟ್ಟವಾದ ಮಂಜು ಕಂಡು ಬರುತ್ತಿದೆ. ಎಲ್ಲೆಡೆ ಮೈಕೊರೆವ ಚಳಿ ದಾಖಲಾಗಿದೆ. ಮುಂದಿನ 05 ದಿನ ದೇಶದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಅತ್ಯಧಿಕ ಚಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಮುನ್ನೆಚ್ಚರಿಕೆ ನೀಡಿದೆ.
ಐಎಂಡಿ ಪ್ರಕಾರ, ಇದೇ ಡಿಸೆಂಬರ್ 14 ಭಾನುವಾರ ಮತ್ತು 15 ರಂದು ಸೋಮವಾರ ದಕ್ಷಿಣ ಭಾರತದ ತೆಲಂಗಾಣ, ಒಡಿಶಾ ಮತ್ತು ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಶೀತ ಅಲೆಗಳ ಉಲ್ಭಣ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ನಾಳೆ ಭಾನುವಾರ ರಂದು ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಕ್ಕೆ ಶೀತ ಅಲೆಗಳ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ತೇವಭರಿತ ಗಾಳಿ ಬೀಸುವಿಕೆಯ ವೇಗ ಪ್ರತಿ ಗಂಟೆಗೆ 35-45 ಕಿಲೋ ಮೀಟರ್ ವೇಗ ಪಡೆಯಬಹುದೆಂದು ಮುನಸೂಚನೆ ನೀಡಲಾಗಿದೆ.

ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಪ್ರತ್ಯೇಕ ಪ್ರದೇಶಗಳಲ್ಲಿ ಡಿಸೆಂಬರ್18 ರವರೆಗೆ ಬೆಳಗ್ಗೆ ಅಧಿಕ ಮಂಜು ಬೀಳುವ ಸಾಧ್ಯತೆ ಇದೆ. ಅಸ್ಸಾಂ ಮತ್ತು ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಕನಿಷ್ಠ ತಾಪಮಾಣದಲ್ಲಿ ತೀವ್ರ ಕುಸಿತ ಕಂಡು ಬರಲಿದ್ದು, ಚಳಿ ಹೆಚ್ಚಾಗಲಿದೆ.
ಡಿಸೆಂಬರ್ 15 ಮತ್ತು 16 ರಂದು ಎರಡು ದಿನ ಮಾತ್ರ ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಶೀತ ಅಲೆ ಕಂಡು ಬರಲಿದೆ. ಗಾಳಿಯ ವೇಗದಲ್ಲಿ ಸಹ ಬದಲಾವಣೆ ಆಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಮಂಜು ಕವಿಯುವ ಹಿನ್ನೆಲೆ ಬೆಳಗ್ಗೆ ಸಂಚಾರ ಅಸ್ತವ್ಯಸ್ತ ಆಗುವ ನಿರೀಕ್ಷೆ ಇದೆ. ಈ ವೇಳೆ ವಾಹನ ಸವಾರರು ಹೆಚ್ಚಿನ ಜಾಗೃತಿ ವಹಿಸಬೇಕಿದೆ.
ಹವಾಮಾನ ವೈರಪರೀತ್ಯ: ಇಲ್ಲಿ ಮಳೆ ಸಂಭವ
ಪಾಕಿಸ್ತಾನ ದೇಶದ ಕರಾವಳಿ ಭಾಗ ಹಾಗೂ ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಕಡಿಮೆ ಒತ್ತಡದ ಪ್ರದೇಶ, ತೀವ್ರ ಸುಳಿಗಾಳಿ ವಾತಾವರಣ ನಿರ್ಮಾಣವಾಗಿದೆ. ಇದು ಸಮುದ್ರಮಟ್ಟದಿಂದ ಸುಮಾರು 3.1 ಕಿಲೋ ಮೀಟರ್ ಎತ್ತರದಲ್ಲಿದೆ. ಇದು ಸೇರಿದಂತೆ ಸಮುದ್ರ ಮೇಲ್ಮೈನಲ್ಲಿ ಆಗಾಗ ಉಂಟಾಗುವ ಬದಲಾವಣೆ, ವೈಪರೀತ್ಯಗಳ ಕಾರಣದಿಂದಾಗಿ ಮುಂದಿನ ಮೂರು ದಿನ (ಡಿಸೆಂಬರ್ 16) ಜಮ್ಮು-ಕಾಶ್ಮೀರ, ಲಡಾಕ್ ಭಾಗಗಳಲ್ಲಿ ಮತ್ತು ಹಿಮಾಚಲ ಪ್ರದೇಶ, ಕೇರಳ, ತಮಿಳುನಾಡು ಮತ್ತು ದ್ವೀಪ ಪ್ರದೇಶಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಶನಿವಾರದ ವಾತಾವರಣ ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications