Tirumala Tirupati: ತಿರುಪತಿಗೆ ವಂದೇ ಭಾರತ್ ರೈಲು- ಎಲ್ಲಿಂದ, ಯಾವಾಗ ಆರಂಭ, ಯಾವ ನಗರಗಳಲ್ಲಿ ನಿಲುಗಡೆ ತಿಳಿಯಿರಿ
ಹೈದರಾಬಾದ್, ಮಾರ್ಚ್ 27: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ( Vande Bharat Express ) ಭಾರತದಲ್ಲಿ ಅಪಾರ ಜನಮನ್ನಣೆಯನ್ನು ಗಳಿಸುತ್ತಿವೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2019 ರಲ್ಲಿ ದೆಹಲಿಯಿಂದ ( Delhi ) ವಾರಣಾಸಿಗೆ ಪ್ರಾರಂಭಿಸಲಾಯಿತು. ಸೆಮಿ-ಹೈ-ಸ್ಪೀಡ್ ರೈಲು ದೇಶದೊಳಗೆ ಜನಪ್ರಿಯ ಸಾರಿಗೆಯಾಗಿ ವೃದ್ದಿಗೊಳ್ಳುತ್ತಿದೆ. ಭಾರತದಲ್ಲಿನ ಇತರ ರೈಲುಗಳಿಗಿಂತ ವಂದೇ ಭಾರತ್ ರೈಲುಗಳು ಹೆಚ್ಚು ವೇಗವಾಗಿ ಸಂಚರಿಸುತ್ತವೆ ಮತ್ತು ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತವೆ.
ಈ ರೈಲುಗಳು ಪ್ರಯಾಣಿಕರ ಪ್ರಯಾಣವನ್ನು ಸುಧಾರಿಸಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ವಂದೇ ಭಾರತ್ ರೈಲುಗಳಲ್ಲಿ ವೈಫೈ ಸಂಪರ್ಕ, 32- ಇಂಚಿನ ಮನರಂಜನಾ ಪರದೆಗಳು ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳಿವೆ. ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗ ಭಾರತದಾದ್ಯಂತ 10 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೆಯು ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್ ರೈಲನ್ನು ಓಡಿಸಲು ಮುಂದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅವಳಿ ನಗರಗಳಿಂದ ( ಹೈದರಾಬಾದ್- ಸಿಕಂದರಾಬಾದ್ ) ತಿರುಮಲಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ವರದಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈ ಸೆಮಿ- ಹೈ ಸ್ಪೀಡ್ ರೈಲು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈಲು ಪ್ರಾರಂಭವಾದಾಗಿನಿಂದ 100 ಪ್ರತಿಶತ ಆಕ್ಯುಪೆನ್ಸಿಯೊಂದಿಗೆ ಓಡುತ್ತಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆಯ ( SCR ) ಮೂಲಗಳ ಪ್ರಕಾರ, ಸಿಕಂದರಾಬಾದ್‌ನಿಂದ ತಿರುಪತಿಗೆ ಸಂಚರಿಸಲಿರುವ ವಂದೇ ಭಾರತ್ ರೈಲು ಬೀಬಿನಗರ ಮತ್ತು ಗುಂಟೂರು ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಮೊದಲ ವಂದೇ ಭಾರತ್ ರೈಲು ವಿಜಯವಾಡದ ಮೂಲಕ ಸಂಚಾರ ಮಾಡುತ್ತಿದೆ. ಇದು ವಾರಂಗಲ್ ಮತ್ತು ಖಮ್ಮಂ ಅನ್ನು ಒಳಗೊಂಡಿದೆ. ಆದ್ದರಿಂದ, ನಲ್ಗೊಂಡ ಮತ್ತು ಗುಂಟೂರಿನ ಪ್ರಯಾಣಿಕರಿಗೆ ಸಿಕಂದರಾಬ್ ಹಾಗೂ ತಿರುಪತಿಗೆ ಸಂಪರ್ಕವನ್ನು ಒದಗಿಸಲು ಭಾರತೀಯ ರೈಲ್ವೆ ಬಯಸಿದೆ.

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ತಯಾರಿಸುತ್ತಿರುವ ಎಸ್‌ಸಿಆರ್ ವಲಯದಲ್ಲಿ ಇದು ಎರಡನೇ ವಂದೇ ಭಾರತ್ ರೈಲಾಗಿದೆ. ತಿರುಪತಿಗೆ ವಂದೇ ಭಾರತ್ ರೈಲನ್ನು ಪರಿಚಯಿಸಲು ಪ್ರಯಾಣಿಕರಿಂದ ಭಾರಿ ಬೇಡಿಕೆ ಬಂದಿದೆ. ಪ್ರತಿ ದಿನ ಸಾವಿರಾರು ಭಕ್ತರು ಹಲವಾರು ರೈಲುಗಳ ಮೂಲಕ ತಿರುಮಲಕ್ಕೆ ಪ್ರಯಾಣಿಸುತ್ತಾರೆ.
ಈ ವಲಯವು ಬೀಬಿನಗರ - ಗುಂಟೂರು ವಿಭಾಗವನ್ನು ಗರಿಷ್ಠ 130 ಕಿಮೀ ವೇಗಕ್ಕೆ ಅಪ್‌ಗ್ರೇಡ್ ಮಾಡಬೇಕಿದೆ. ರೈಲುಗಳು ಪ್ರಸ್ತುತ ಈ ವಿಭಾಗದಲ್ಲಿ ಗರಿಷ್ಠ 110 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇತರ ವಿಭಾಗಗಳಾದ ಸಿಕಂದರಾಬಾದ್- ಬೀಬಿನಗರ ಮತ್ತು ಗುಂಟೂರು- ಗುಡೂರ್ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ತಿರುಪತಿಗೆ ವಂದೇ ಭಾರತ ರೈಲನ್ನು ಅನುಮೋದಿಸಿದ ನಂತರ, ರೈಲ್ವೆಯು ಬೀಬಿನಗರ - ಗುಂಟೂರು ವಿಭಾಗವನ್ನು ಸಹ ನವೀಕರಿಸುತ್ತದೆ.
ಪ್ರಸ್ತುತ, ಸಿಕಂದರಾಬಾದ್ - ತಿರುವನಂತಪುರ ಶಬರಿ ಎಕ್ಸ್‌ಪ್ರೆಸ್, ಮತ್ತು ಲಿಂಗಂಪಲ್ಲಿ - ತಿರುಪತಿ ನಾರಾಯಣಾದ್ರಿ ಎಕ್ಸ್‌ಪ್ರೆಸ್‌ಗಳು ಗುಂಟೂರು ಮೂಲಕ ತಿರುಪತಿಗೆ ಕಾರ್ಯನಿರ್ವಹಿಸುತ್ತಿವೆ. ಈ ಪ್ರಯಾಣವು ಸುಮಾರು 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣದ ಸಮಯವನ್ನು ಒಂಬತ್ತು ಗಂಟೆಗಳಿಗಿಂತ ಕಡಿಮೆಗೊಳಿಸುತ್ತದೆ. ಸಿಕಂದರಾಬಾದ್ - ತಿರುಪತಿ ವಂದೇ ಭಾರತ್‌ಗೆ ನಲ್ಗೊಂಡ, ಗುಂಟೂರು, ಓಂಗೋಲ್, ನೆಲ್ಲೂರು ಮತ್ತು ಗುಡೂರಿನಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗುವ ಸಾಧ್ಯತೆಯಿದೆ.

ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ರೈಲನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ
ಆಂದ್ರಪ್ರದೇಶ- ತೆಲಂಗಾಣಗಳಲ್ಲಿ ವಿವಿಧ ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8 ರಂದು ಹೈದರಾಬಾದ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅವರು ಸುಮಾರು 700 ಕೋಟಿ ರೂಪಾಯಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಮರು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಅಲ್ಲದೆ, ಸಿಕಂದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.












Click it and Unblock the Notifications