ಕೆಟ್ಟು ನಿಂತ ಪ್ರಭಾಸ್ ಗಾಡಿಯನ್ನು ತಳ್ಳಲು ಬರುತ್ತಿದ್ದಾರಂತೆ ಪ್ರಶಾಂತ್ ನೀಲ್: ಈಗ ಕೆಜಿಎಫ್ ನಿರ್ದೇಶಕನೇ ಗತಿ ಎಂದ ಫ್ಯಾನ್ಸ್
ಬೆಂಗಳೂರು, ಜುಲೈ 04: ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ 'ಸಲಾರ್' ಚಿತ್ರದ ಟೀಸರ್ ಜುಲೈ 6 ರಂದು (ಶುಕ್ರವಾರ) ಬೆಳಗ್ಗೆ 5:12 ಕ್ಕೆ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಪ್ರಭಾಸ್ ಅವರು ಕ್ಯಾಮರಾ ಕಡೆಗೆ ಬೆನ್ನು ತಿರುಗಿಸಿ, ಸುತ್ತಿಗೆಯನ್ನು ಕೈಯಲ್ಲಿ ಹಿಡಿದಿರುವ ದೃಶ್ಯ ಕಂಡುಬಂದಿದೆ. ನಿರ್ದೇಶಕ ಪ್ರಶಾಂತ್ ನೀಲ್ ಘೋಷಿಸಿದಂತೆ, ಈ ಸಿನಿಮಾದ ಜೀವಾಳ ಕ್ರೌರ್ಯವೇ ಆಗಿದೆ.
ಪ್ರಶಾಂತ್ ನೀಲ್ ಅವರು ಯಶ್ ಅಭಿನಯದ ಕೆಜಿಎಫ್ ಅನ್ನು ನಿರ್ದೇಶಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ನಿರ್ದೇಶಕ. ಇದನ್ನು ನಿರ್ದೇಶನ ಮಾಡಿದ್ದು ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಈ ಕಾಂಬಿನೇಷನ್ ಅಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರ.

ಇದೆಲ್ಲದರ ಹೊರತಾಗಿಯೂ ಪ್ರಭಾಸ್ ಅವರ ಭವಿಷ್ಯ ಈ ಸಿನಿಮಾದ ಮೇಲೆ ನಿಂತಿದೆ ಎಂಬ ಮಾತುಗಳು ಓಡಾಡುತ್ತಿವೆ. ರಾಜಮೌಳಿ ನಿರ್ದೇಶದ ಹಿಟ್ ಚಿತ್ರ ಬಾಹುಬಲಿಯ ನಂತರ ಪ್ರಭಾಸ್ ನಟನೆಯ ಸಾಲು ಸಾಲು ಚಿತ್ರಗಳು ಸೋಲುಕಂಡಿವೆ.
2019 ರಲ್ಲಿ ಬಿಡುಗಡೆಯಾದ ಸಾಹೋ, 2022 ರಲ್ಲಿ ಬಿಡುಗಡೆಯಾದ ರಾಧೆ-ಶ್ಯಾಮ್ ಹಾಗೂ 2023 ರಲ್ಲಿ ಬಿಡುಗಡೆಯಾದ ಆದಿಪುರುಷ್ ಚಿತ್ರಗಳು ಮಖಾಡೆ ಮಲಗಿವೆ. ಕಳೆದ ತಿಂಗಳು ಬಿಡುಗಡೆಯಾದ ಆದಿಪುರುಷ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ದೇಶದಾದ್ಯಂತ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿದೆ.
2017 ರಿಂದ ಪ್ರಭಾಸ್‌ಗೆ ಯಾವುದೇ ಯಶಸ್ಸು ದೊರೆಯದಿರುವುದು ಅಭಿಮಾನಿಗಳ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಭಾಸ್ ಅಭಿಮಾನಿಗಳು ಪ್ರಶಾಂತ್ ನೀಲ್‌ರನ್ನೇ ನೆಚ್ಚಿಕೊಂಡಿದ್ದಾರೆ. ಪ್ರಭಾಸ್‌ಗೆ ಇರುವುದು ಇದೊಂದು ಕಡೆಯ ಚಾನ್ಸ್ ಎಂದು ಹೇಳುತ್ತಿದ್ದಾರೆ.

ಬೆಳಿಗ್ಗೆ ಟೀಸರ್ ರಿಲೀಸ್: ಹುಟ್ಟಿಕೊಂಡ ಹಲವು ಊಹಾಪೋಹ
ಸಲಾರ್ ಟೀಸರ್ ಅನ್ನು ಬೆಳಿಗ್ಗೆ 5:12 ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿದೆ. ಇದರ ಹಿಂದೆ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಕೆಜೆಎಫ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಬೆಳಿಗ್ಗೆ 5:12 ಕ್ಕೆ ಸಮುದ್ರದಲ್ಲಿ ಮುಳುಗುವ ದೃಶ್ಯವಿದೆ. ಇದನ್ನು ಸಲಾರ್ ಚಿತ್ರಕ್ಕೆ ಕನೆಕ್ಟ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆದಿವೆ.
ಇನ್ನು ಕೆಲವರು ಹೊಂಬಾಳೆ ನಿರ್ಮಾಣ ಸಂಸ್ಥೆಯು ರಾಶಿಭವಿಷ್ಯವನ್ನು ನಂಬುತ್ತದೆ ಆ ಹಿನ್ನೆಲೆಯಲ್ಲಿ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅದೇನೇ ಇರಲಿ ಸಲಾರ್ ಚಿತ್ರದ ಮೂಲಕ ಪ್ರಭಾಸ್ ಕಮ್‌ಬ್ಯಾಕ್ ಮಾಡಲಿ ಎಂಬುದು ಸಿನಿರಸಿಕರ ಒತ್ತಾಸೆಯಾಗಿದೆ.












Click it and Unblock the Notifications