ರಾಜೀವ್ ಗಾಂಧಿ ಬಗ್ಗೆ ಡೈಲಾಗ್, ನಟ ನವಾಜುದ್ದೀನ್ ವಿರುದ್ಧ ದೂರು
ಕೋಲ್ಕತ್ತಾ, ಜುಲೈ 11: ನೆಟ್ ಫ್ಲಿಕ್ಸ್ ನ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸುವಂಥ ಡೈಲಾಗ್ ಇದೆ ಎಂದು ಆರೋಪಿಸಲಾಗಿದೆ.
ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರೊಬ್ಬರು ನಟ ನವಾಝುದ್ದೀನ್ ಸಿದ್ದಿಕಿ, ನೆಟ್‌ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಕೋಲ್ಕತ್ತಾ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ ಎಂದು ಡಿಎನ್ ಎ ವರದಿ ಮಾಡಿದೆ.

ರಾಜೀವ್ ಕುಮಾರ್ ಸಿನ್ಹಾ ಎಂಬುವರು ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜೀವ್ ಗಾಂಧಿ ಹೇಳುವಾಗ ಅಸಂವಿಧಾನಿಕ ಪದಗಳನ್ನು ಬಳಸಲಾಗಿದೆ ಹಾಗೂ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದೂರು ಸ್ವೀಕರಿಸಿರುವ ಠಾಣಾಧಿಕಾರಿಗಳು, ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುವುದು ಹಾಗೂ ಮುಂದಿನ ಮೂರು ದಿನಗಳ ಒಳಗೆ ಪ್ರಥಮ ಮಾಹಿತಿ ವರದಿ ಸಂಖ್ಯೆಯನ್ನು ಕಳುಹಿಸಿಕೊಡಲಾಗುವುದು ಎಂದಿದ್ದಾರೆ.
ಜುಲೈ 6ರಿಂದ ಆರಂಭವಾದ ಈ ವೆಬ್ ಸರಣಿಯಲ್ಲಿ ಸಿದ್ದಿಕಿ ಅವರು ರಾಜೀವ್ ಗಾಂಧಿ ಅವರನ್ನು ನಿಂದನೀಯ ಪದ ಬಳಸಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ಕಾಲದ ಕೆಲವು ಸತ್ಯಗಳನ್ನು ತಪ್ಪು ವ್ಯಾಖ್ಯಾನಿಸಿದ್ದಾರೆ ಎನ್ನಲಾಗಿದೆ.
2006ರಲ್ಲಿ ವಿಕ್ರಮ್ ಚಂದ್ರ ಬರೆದ ಕಾದಂಬರಿ ಆಧಾರಿತ ಕಥೆಯನ್ನು ಸ್ಮಿತ್ ಸಿಂಗ್, ವಸತ್ ನಾಥ್,ವರುಣ್ ಗ್ರೋವರ್ ಅವರು ವೆಬ್ ಸರಣಿ ಮಾಡಿದ್ದಾರೆ. ಸುಮಾರು 8 ಗಂಟೆ ಅವಧಿಯ ಈ ಸರಣಿಯನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೊತ್ವಾನೆ ನಿರ್ದೇಶಿಸಿದ್ದಾರೆ.
ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದು, ಈಗಾಗಲೇ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications