Sabarimala: ಮಂಡಲ ಪೂಜೆಯ ನಂತರ ಮುಚ್ಚಲಾಗಿದ್ದ ಶಬರಿಮಲೆ ದೇವಸ್ಥಾನ ಮತ್ತೆ ಓಪನ್
ಮಂಡಲ ಪೂಜೆಯ ನಂತರ ಬುಧವಾರ ತಡರಾತ್ರಿ ಮುಚ್ಚಲಾಗಿದ್ದ ಅಯ್ಯಪ್ಪ ದೇಗುಲವನ್ನು ಮಕರವಿಳಕ್ಕು ಮಹೋತ್ಸವಕ್ಕಾಗಿ ಡಿಸೆಂಬರ್ 30 ರಂದು ಸಂಜೆ ಮತ್ತೆ ತೆರೆಯಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 15 ರಂದು ನಡೆಯುವ ಮಕರವಿಳಕ್ಕು ಉತ್ಸವದ ಪೂರ್ವಭಾವಿಯಾಗಿ ಜನವರಿ 13 ಮತ್ತು 14 ರಂದು "ಪ್ರಸಾದ ಶುದ್ಧ ಕ್ರಿಯೆ" ಮತ್ತು "ಬಿಂಬ ಶುದ್ಧ ಕ್ರಿಯೆ" ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮಕರವಿಳಕ್ಕು ದಿನದಂದು ಸನ್ನಿಧಾನಂನಲ್ಲಿ (ದೇವಾಲಯ ಸಂಕೀರ್ಣ) "ತಿರುವಾಭರಣಂ" ಸ್ವಾಗತ ಮತ್ತು ಆಭರಣಗಳಿಂದ ಅಯ್ಯಪ್ಪ ಮೂರ್ತಿಯನ್ನು ಅಲಂಕರಿಸುವ "ದೀಪಾರಾಧನೆ" ಯನ್ನು ಭಕ್ತರು ವೀಕ್ಷಿಸುತ್ತಾರೆ. ಮಕರವಿಳಕ್ಕು ದರ್ಶನದ ನಂತರ, ಯಾತ್ರಾರ್ಥಿಗಳಿಗೆ ಪ್ರಾರ್ಥನೆ ಸಲ್ಲಿಸಲು ಬೆಟ್ಟದ ದೇವಾಲಯವು ಜನವರಿ 20 ರವರೆಗೆ ತೆರೆದಿರುತ್ತದೆ ಎಂದು ಟಿಡಿಬಿ ಪ್ರಕಟಣೆ ತಿಳಿಸಿದೆ.
ಮಂಡಲ ಪೂಜೆ
ಬೆಟ್ಟದ ದೇಗುಲದಲ್ಲಿ ಮಂಡಲ ಪೂಜೆಯ ವೇಳೆ ಸಾವಿರಾರು ಯಾತ್ರಾರ್ಥಿಗಳು ಬುಧವಾರ ಅಯ್ಯಪ್ಪ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಸಂಜೆ ವಿಧ್ಯುಕ್ತ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾದ ಪವಿತ್ರ ಚಿನ್ನದ ವಸ್ತ್ರದಿಂದ ಪ್ರಧಾನ ದೇವರಾದ ಅಯ್ಯಪ್ಪ ದೇವರ ವಿಗ್ರಹವನ್ನು ಅಲಂಕರಿಸಿ ಪೂಜೆಯನ್ನು ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಮೋಹನರು ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು, ಅವರು ಮೂರ್ತಿಯನ್ನು ಪವಿತ್ರ ವಸ್ತ್ರದಿಂದ ಅಲಂಕರಿಸಿದರು. ಈ ಸಂದರ್ಭದಲ್ಲಿ 'ಕಲಭಂಹಿಷೇಕ' ಮತ್ತು 'ಕಲಶಾಭಿಷೇಕ' ಸೇರಿದಂತೆ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.
ಶಬರಿಮಲೆ ಯಾತ್ರೆ
ಶಬರಿಮಲೆ ಋತು ಆರಂಭವಾಗಿದೆ. ಈ ದಿನಗಳಲ್ಲಿ ಅಯ್ಯಪ್ಪನ ದರ್ಶನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಉಪವಾಸ ಆರಂಭಿಸುತ್ತಾರೆ. ಇದರಿಂದ ಶಬರಿಮಲೆ ದೇಗುಲ ತೆರೆಯಲಾಗಿದ್ದು, ನಿತ್ಯ ಪೂಜೆಗಳು ನಡೆಯುತ್ತಿವೆ. ಸತತ 41 ದಿನಗಳ ಕಾಲ ಪೂಜೆಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಭಕ್ತರು ಶಬರಿಮಲೆಗೆ ತೆರಳಲು ಆರಂಭಿಸಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕಟ್ಟುನಿಟ್ಟಾದ ಸಂಪ್ರದಾಯವನ್ನು ಹಲವು ದಿನಗಳ ಮೊದಲೇ ಪಾಲಿಸಿಕೊಂಡು ಬರುತ್ತಾರೆ. ಸಾಕಷ್ಟು ಭಕ್ತರು ಮನೆಯಿಂದ ದೂರವುಳಿದು ಸ್ವತ: ಅಡುಗೆ ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಂದಲೂ ದೂರ ಇರುತ್ತಾರೆ. ಮಡಿಮೈಲಿಗೆಯನ್ನು ಎಚ್ಚರಿಕೆಯಿಂದ ಪಾಲಿಸುತ್ತಾರೆ. ಬಳಿಕ ಕೋಟ್ಯಾನುಕೋಟಿ ಭಕ್ತರು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.
41 ದಿನ ಕಠಿಣ ವ್ರತವನ್ನು ಮಾಡಿ ಶಬರಿಮಲೆಯಕ್ಕೆ ಭೇಟಿ ನೀಡುವ ಭಕ್ತರು ಈ ಸಮಯದಲ್ಲಿ ಕ್ಷೌರ, ಅಸಭ್ಯ ಭಾಷೆ ಬಳಕೆ, ತಂಬಾಕು ಅಥವಾ ಮದ್ಯ ಸೇವನೆ ಸೇರಿದಂತೆ ದುರ್ವಾಸೆಯಿಂದ ದೂರವಿರುತ್ತಾರೆ. ಭಕ್ತರು ಕಪ್ಪು, ಕೇಸರಿ ಅಥವಾ ಸರಳ ನೀಲಿ ಬಟ್ಟೆಗಳನ್ನು ಧರಿಸುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಭಕ್ತರು ನಿಯಮಗಳನ್ನು ಪಾಲಿಸುತ್ತಾರೆ. ಹೀಗಿರುವಾಗ ಹಣದ ಆಸೆಗೆ ಕೆಲ ವ್ಯಾಪಾರಿಗಳು ಕಳಪೆ ಗುಣಮಟ್ಟದ ಆಹಾರ ನೀಡಿ ಭಕ್ತರಿಗೆ ವಂಚಿಸಿದ್ದು ಬೇಸರ ತಂದಿದೆ. ಇದರಿಂದಾಗಿ ಈ ಬಗ್ಗೆ ಭಕ್ತರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.












Click it and Unblock the Notifications