ಶಬರಿಮಲೆ: 39 ದಿನಗಳಲ್ಲಿ 31 ಲಕ್ಷ ಭಕ್ತರ ಭೇಟಿ, 204 ಕೋಟಿ ರೂಪಾಯಿ ಆದಾಯ
ಶಬರಿಮಲೆಯ ಆದಾಯ ಸಂಗ್ರಹವು ಮಂಗಳವಾರ 200 ಕೋಟಿ ರೂಪಾಯಿಗಳನ್ನು ದಾಟಿದೆ, ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಡಿಸೆಂಬರ್ 27 ರಂದು ಮಂಗಳಕರ ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಅಯ್ಯಪ್ಪ ದೇಗುಲವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್, ಯಾತ್ರಾರ್ಥಿಗಳು "ಕಾಣಿಕೆ" ಎಂದು ಅರ್ಪಿಸುವ ನಾಣ್ಯಗಳನ್ನು ಎಣಿಸಿದ ನಂತರ ಆದಾಯದ ಮೊತ್ತವು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟು ರೂ 204.30 ಕೋಟಿ ಆದಾಯದಲ್ಲಿ ರೂ 63.89 ಕೋಟಿಯನ್ನು ಭಕ್ತರು "ಕಾಣಿಕೆ" ಅರ್ಪಿಸಿದ್ದಾರೆ ಮತ್ತು "ಅರವಣ" (ಸಿಹಿ ನೈವೇದ್ಯ) ಮಾರಾಟದ ಮೂಲಕ ರೂ 96.32 ಕೋಟಿ ಗಳಿಸಲಾಗಿದೆ ಎಂದು ಅವರು ಹೇಳಿದರು.
ಯಾತ್ರಾರ್ಥಿಗಳಿಗೆ ಮತ್ತೊಂದು ಸಿಹಿ ನೈವೇದ್ಯ "ಅಪ್ಪಂ" ಮಾರಾಟ ಮಾಡುವ ಮೂಲಕ 12.38 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅವರು ಹೇಳಿದರು.
31 ಲಕ್ಷ ಭಕ್ತರ ಭೇಟಿ
ನಡೆಯುತ್ತಿರುವ ವಾರ್ಷಿಕ ಯಾತ್ರಾ ಋತುವಿನಲ್ಲಿ ಬೆಟ್ಟದ ದೇಗುಲದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿರುವುದನ್ನು ಪ್ರಸ್ತಾಪಿಸಿದ ಟಿಡಿಬಿ ಅಧ್ಯಕ್ಷರು, ಈ ಋತುವಿನಲ್ಲಿ ಡಿಸೆಂಬರ್ 25 ರವರೆಗೆ ಶಬರಿಮಲೆಗೆ 31,43,163 ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಿರುವಾಂಕೂರು ದೇವಸ್ವಂ ಬೋರ್ಡ್ ತನ್ನ ಮಿತಿಗಳ ಹೊರತಾಗಿಯೂ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದೆ ಎಂದು ಹೇಳಿದ ಪ್ರಶಾಂತ್, ಮಂಡಳಿಯು ತನ್ನ ಅನ್ನದಾನ ಮಂಡಲಂ ಮೂಲಕ ಡಿಸೆಂಬರ್ 25 ರವರೆಗೆ 7,25,049 ಜನರಿಗೆ ಉಚಿತ ಆಹಾರ ನೀಡಿದೆ ಎಂದು ಹೇಳಿದರು.
ಮಂಡಲ ಪೂಜೆಯ ನಂತರ ದೇಗುಲವನ್ನು ಬುಧವಾರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು ಮತ್ತು ಡಿಸೆಂಬರ್ 30 ರಂದು ಮಕರವಿಳಕ್ಕು ಆಚರಣೆಗಾಗಿ ಮತ್ತೆ ತೆರೆಯಲಾಗುವುದು ಎಂದು ಹೇಳಿದರು.
ಶಬರಿಮಲೆ ಬೆಟ್ಟದ ದೇಗುಲ ಜನವರಿ 15 ರಂದು ಮಕರವಿಳಕ್ಕು ಆಚರಣೆಗೆ ಸಾಕ್ಷಿಯಾಗಲಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.
ಕೋವಿಡ್ ಆತಂಕದ ನಡುವೆ ಕೂಡ ಈ ಬಾರಿ ಶಬರಿಮಲೆ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು ದಾಖಲೆಯ ಆದಾಯ ಗಳಿಸಿದೆ. ಆದರೂ ದೇವಸ್ಥಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications