ಅದ್ಭುತ ಯೋಜನೆ ಪ್ರಕಟಿಸಿದ ಉದ್ಯಮಿ ಮುಕೇಶ್ ಅಂಬಾನಿ: ‘ಜಿಯೋ ಬ್ರೈನ್’ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆರಂಭ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಹೊಸ ಸಂಚಲನ ಸೃಷ್ಟಿ ಮಾಡಿರುವ 'ಜಿಯೋ' ಸಂಸ್ಥೆ ಇದೀಗ, ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಹೊಸ ಸಾಧನೆಗೆ ಮುಂದೆ ಬಂದಿದೆ. ಅದ್ರಲ್ಲೂ ಆಧುನಿಕ ಜಗತ್ತಿನಲ್ಲಿ ಅತಿ ವೇಗವಾಗಿ ಹೆಸರು ಮಾಡುತ್ತಿರುವ ಹಾಗೂ ಮನುಷ್ಯರ ಭವಿಷ್ಯ ಎಂದು ಕರೆಯಲಾಗುತ್ತಿರುವ 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ಕ್ಷೇತ್ರಕ್ಕೆ ಕೂಡ ಭರ್ಜರಿ ಎಂಟ್ರಿ ಕೊಟ್ಟಿದೆ 'ಜಿಯೋ' ಸಂಸ್ಥೆ. ಈ ಕುರಿತು ಇದೀಗ ಮಹತ್ವದ ಘೋಷಣೆ ಹೊರಡಿಸಲಾಗಿದೆ. ಹಾಗಾದ್ರೆ ಏನದು ಮಹತ್ವದ ಘೋಷಣೆ? ಬನ್ನಿ ತಿಳಿಯೋಣ.
ಅಂದಹಾಗೆ ಜಿಯೋ ಬ್ರೈನ್ ಮೂಲಕವಾಗಿ ಶೀಘ್ರದಲ್ಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಪ್ರಾರಂಭಿಸಲು ತಯಾರಿ ಈಗ ಸಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನ ಉದ್ದೇಶಿಸಿ ಮಾತನಾಡಿದ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ ಅವರು ಇದೀಗ ಮಹತ್ವದ ಮಾಹಿತಿಯನ್ನ ನೀಡಿದ್ದಾರೆ. ಕನೆಕ್ಟೆಡ್ ಇಂಟೆಲಿಜೆನ್ಸ್ ವಿಶ್ವ ದರ್ಜೆಯ ಮೂಲ ಸೌಕರ್ಯದೊಂದಿಗೆ ಬರುತ್ತದೆ. ಕಂಪನಿ "ಎಐ ಎವೆರಿವೇರ್ ಫಾರ್ ಎವರಿಒನ್" ಎಂಬ ಥೀಮ್ ಮೇಲೆ ಇದನ್ನ ಪ್ರಾರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ?
ಸಂಪೂರ್ಣ ಎಐ ಒಳಗೊಂಡಿರುವ ಉಪಕರಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಸಮಗ್ರ ಸೂಟ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು 'ಜಿಯೋ ಬ್ರೈನ್' ಎಂದು ಕರೆಯಲಾಗುತ್ತದೆ, ರಿಲಯನ್ಸ್ ಜಿಯೋ ಬ್ರೈನ್ ಅನ್ನು ಗಟ್ಟಿಗೊಳಿಸುವ ಮೂಲಕ ನಾವು ಶಕ್ತಿಯುತ, ಎಐ ಸೇವೆಗಳ ಪ್ಲಾಟ್ ಫಾರ್ಮ್ ರೂಪಿಸುತ್ತೇವೆ ಎಂಬುದಾಗಿ ನಾನು ಭಾವಿಸುತ್ತೇನೆ ಎಂದಿದ್ದಾರೆ ದೇಶದ ಅತಿ ದೊಡ್ಡ ಉದ್ಯಮ ಸಂಸ್ಥೆಯ ಮುಖ್ಯಸ್ಥ ಹಾಗೂ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು.
ಹಸಿರು ಶಕ್ತಿಯ ಬೆಂಬಲ
ಜಾಮ್ ನಗರದಲ್ಲಿ 'ಗಿಗಾವ್ಯಾಟ್' ಪ್ರಮಾಣದ 'ಎಐ' ಸಿದ್ಧ ಡೇಟಾ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿದ್ದೇವೆ, ಇದು ಸಂಪೂರ್ಣ ರಿಲಯನ್ಸ್ ಹಸಿರು ಶಕ್ತಿಯಿಂದಲೇ ಚಾಲಿತವಾಗುತ್ತದೆ. ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು, ನಮ್ಮ ಗುರಿಯಾಗಿದೆ. 'ಇದು ಭಾರತದಲ್ಲಿ ಎಐ ಅಪ್ಲಿಕೇಷನ್ ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಸಂಪರ್ಕ ಸಿಗುವಂತೆ ಮಾಡುತ್ತದೆ' ಅಂತ ಈಗ ಉದ್ಯಮಿ ಮುಕೇಶ್ ಅಂಬಾನಿ ಅವರು ಮಾಹಿತಿ ನೀಡಿದ್ದಾರೆ.
100 ಜಿಬಿ ಉಚಿತ ಕ್ಲೌಡ್ ಸಂಗ್ರಹಣೆ
ಇದರ ಜೊತೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಕೂಡ ನೀಡಿದ್ದು, ಜಿಯೋ ಎಐ -ಕ್ಲೌಡ್ ವೆಲ್ಕಮ್ ಆಫರ್ ಅನ್ನು ಘೋಷಿಸಲಾಯಿತು. ಡಿಜಿಟಲ್ ಕಂಟೆಂಟ್ & ಡೇಟಾ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಸಂಪರ್ಕಿಸಲು 100 ಜಿಬಿ ತನಕ ಉಚಿತ ಕ್ಲೌಡ್ ಸಂಗ್ರಹಣೆ ದೊರೆಯಲಿದೆ. ಹಾಗೇ ಜಿಯೋ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಹಲವು ಹೊಸ 'ಎಐ' ಸೇವೆಗಳನ್ನೂ ಘೋಷಿಸಿದ್ದು, ಜಿಯೋ ಟಿವಿಒಎಸ್ (Jio TVOS), ಹಲೋ ಜಿಯೋ (HelloJio), ಜಿಯೋ ಐಒಟಿ ಸಲ್ಯೂಷನ್ (Jio Home IoT), ಜಿಯೋ ಹೋಮ್ (JioHome) ಅಪ್ಲಿಕೇಷನ್ ಮತ್ತು ಜಿಯೋ ಫೋನ್ ಕಾಲ್ ಎಐ (Jio Phonecall AI) ಹೊಸ ಸೇವೆಗಳಾಗಿ ಜಾರಿಗೆ ಬರಲಿವೆ.












Click it and Unblock the Notifications