ಸಿಧು ತಲೆಗೆ 5 ಲಕ್ಷ ರೂ. ಎಂದ ಬಜರಂಗ ದಳ ಮುಖಂಡ
ಲಕ್ನೋ, ಆಗಸ್ಟ್ 21: ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ತಲೆ ತಂದುಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿಕೆ ನೀಡಿ ಬಜರಂಗದಳದ ಮುಖಂಡ ಸಂಜಯ್ ಜಾತ್ ವಿವಾದ ಸೃಷ್ಟಿಸಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ ಸಂಸದ ನವಜೋತ್ ಸಿಂಗ್ ಸಿಧು ಅವರಿಗೆ ದೇಶಾಭಿಮಾನವಿಲ್ಲ. ಆದ್ದರಿಂದ ಅವರ ತಲೆಯನ್ನು ತಂದುಕೊಟ್ಟವರಿಗೆ ಐದು ಲಕ್ಷ ರೂಪಾಯಿಗಳ ಬಹುಮಾನ ನೀಡುತ್ತೇನೆ ಎಂದು ಜಾತ್ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಸೈನಿಕರ ರಕ್ತಕ್ಕಾಗಿ ಹಾತೊರೆಯುವ ಪಾಕಿಸ್ತಾನೀ ಸರ್ಕಾರವನ್ನು ಸಿಧು ಬೆಂಬಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಹುಶಃ ಸಿಧು ಅವರಿಗೆ ಗುರು ಗೋವಿಂದ್ ಸಿಂಗ್ ಅವರ ತತ್ವಾದರ್ಶಗಳು ಮರೆತುಹೋಗಿರಬೇಕು ಎಂದು ಅವರು ಲೇವಡಿ ಮಾಡಿದ್ದಾರೆ.
ಆಗಸ್ಟ್ 18 ರಂದು ಇಸ್ಲಾಮಾಬಾದ್ ನಲ್ಲಿ ನಡೆದ ಇಮ್ರಾನ್ ಖಾನ್ ಪದಗ್ರಹಣ ಕಾರ್ಯಕ್ರಮಕ್ಕೆ ಅವರ ಆಮಂತ್ರಣದ ಮೇರೆಗೆ ಸಿಧು ತೆರಳಿದ್ದರು. ಇಬ್ಬರೂ ಕ್ರಿಕೆಟ್ ಆಟಗಾರರಾಗಿ ಸ್ನೇಹಿತರು. ಆದ್ದರಿಂದ ಅವರ ಆಮಂತ್ರಣಕ್ಕೆ ಕಿವಿಗೊಟ್ಟು ಹೋಗುತ್ತಿದ್ದೇನೆ ಎಂದು ಸಿಧು ಸಮಜಾಯಿಷಿ ನೀಡಿದ್ದರೂ, ಅವರು ಪಾಕಿಸ್ತಾನಕ್ಕೆ ತೆರಳಿದ್ದನ್ನು ಹಲವರು ವಿರೋಧಿಸಿದ್ದರು.












Click it and Unblock the Notifications