ಪ್ರತಿಭಟನಾ ನಿರತ ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ರಾಮ್‌ದೇವ್, ಬ್ರಿಜ್‌ಭೂಷಣ್ ಬಂಧನಕ್ಕೆ ಒತ್ತಾಯ
ದೆಹಲಿ ಮೇ 27: ಹಲವು ವಾರಗಳಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಯೋಗ ಗುರು ರಾಮ್‌ದೇವ್ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ರಾಮ್‌ದೇವ್, ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್‌ಭೂಷಣ್ ಅವರನ್ನು ಕಂಬಿ ಹಿಂದೆ ಹಾಕಬೇಕು ಎಂದು ಹೇಳಿದ್ದಾರೆ.
"ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ದೇಶದ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕುಳಿತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಕಂಬಿಗಳ ಹಿಂದೆ ಹಾಕಬೇಕು. ಅವರು ತಾಯಿ, ಹೆಣ್ಣುಮಕ್ಕಳು, ಸಹೋದರಿಯರ ಬಗ್ಗೆ ಪ್ರತಿದಿನ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ದುಷ್ಟ ಕೃತ್ಯ" ಎಂದು ರಾಮದೇವ್ ಹೇಳಿದ್ದಾರೆ.

ಬ್ರಿಜ್‌ಭೂಷಣ್ ವಿರುದ್ಧ ಎಫ್ಐಆರ್ ದಾಖಲಾದ ನಂತರವೂ ಬಂಧಿಸದಿರುವ ಬಗ್ಗೆ ಆಕ್ರೋಶಗೊಂಡ ರಾಮ್‌ದೇವ್, "ನಾನು ಹೇಳಿಕೆಯನ್ನು ಮಾತ್ರ ನೀಡಬಲ್ಲೆ. ಅವರನ್ನು ಜೈಲಿಗೆ ಕಳುಹಿಸಬೇಕಾಗಿರುವುದು ಪೊಲೀಸರ ಮುಖ್ಯ ಕಾರ್ಯ" ಎಂದರು.
"ನಾನು ಎಲ್ಲಾ ಪ್ರಶ್ನೆಗಳಿಗೆ ರಾಜಕೀಯವಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದ್ದೇನೆ. ನಾನು ಬೌದ್ಧಿಕವಾಗಿ ದಿವಾಳಿಯಲ್ಲ, ನಾನು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ವಿಕಲಾಂಗನಲ್ಲ, ನನಗೆ ದೇಶದ ಬಗ್ಗೆ ದೂರದೃಷ್ಟಿ ಇದೆ" ಎಂದು ಯೋಗ ಗುರು ಹೇಳಿದರು. "ನಾನು ರಾಜಕೀಯ ದೃಷ್ಟಿಕೋನದಿಂದ ಹೇಳಿಕೆಗಳನ್ನು ನೀಡಿದಾಗ, ಗುಡುಗು ಸಹಿತ ಮಳೆಯಾಗುತ್ತದೆ" ಎಂದು ರಾಮ್‌ದೇವ್ ಹೇಳಿದರು.

ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23 ರಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಆರೋಪಿಯನ್ನು ಬಂಧಿಸಲಾಗಿಲ್ಲ. ಹೀಗಾಗಿ ಕ್ರೀಡಾಪಟುಗಳು ಸರ್ಕಾರಕ್ಕೆ ಈ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಲು ಪ್ರತಿಭಟನೆಯಲ್ಲಿ ಒಂದು ಹೆಚ್ಚೆ ಮುಂದಿಟ್ಟಿದ್ದಾರೆ. ಹೀಗಾಗಿ ಮೇ 28ರಂದು ಮಹಾಪಂಚಾಯತ್ ನಡೆಸಲು ಯೋಜಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಹೊಸ ಸಂಸತ್ತಿನ ಕಟ್ಟಡವನ್ನು ಅನಾವರಣಗೊಳಿಸಲು ಸಜ್ಜಾದ ದಿನದಂದು (ಮೇ 28) ಮಹಾಪಂಚಾಯತ್ ನಡೆಯಲಿದೆ. ಭಾನುವಾರದ ಮಹಾಪಂಚಾಯತ್‌ಗೆ ಬೆಂಬಲ ಪಡೆಯಲು ಒಲಿಂಪಿಕ್ ಪದಕ ವಿಜೇತ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಇಬ್ಬರೂ ಹರಿಯಾಣ ಮತ್ತು ನೆರೆಯ ರಾಜ್ಯಗಳಲ್ಲಿ ಸಂಚರಿಸುತ್ತಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಕ್ರಮ ತೆಗೆದುಕೊಳ್ಳದ ಬಗ್ಗೆ ಟೀಕಿಸಿದ ವಿನೇಶ್ ಫೋಗಟ್, "ನಾವು ನಮ್ಮ ದೇಶಕ್ಕಾಗಿ ಪದಕಗಳನ್ನು ಗೆದ್ದಾಗ, ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ಅಪಾರ ಗೌರವವಿದೆ ಎಂದು ನಾವು ಭಾವಿಸಿದ್ದೇವು. ಆದರೆ ಇಂದು ಆ ಹೆಣ್ಣು ಮಕ್ಕಳೇ ನ್ಯಾಯ ಕೋರಿ ರಸ್ತೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ಇದು ನಮ್ಮ ತ್ರಿವರ್ಣ ಧ್ವಜದ ಗೌರವಕ್ಕಾಗಿ ನಡೆಯುವ ಹೋರಾಟ. ಮೇ 28 ರಂದು ಸಂಸತ್ ಭವನದ ಹೊರಗೆ ಮಹಾಪಂಚಾಯತ್ ನಡೆಯಲಿದೆ" ಎಂದು ಹೇಳಿದ್ದಾರೆ.
ಇನ್ನೂ ಖಾಪ್‌ಗಳು ಮತ್ತು ರೈತ ಸಂಘಟನೆಗಳ ಬೆಂಬಲ ಕುಸ್ತಿಪಟುಗಳಿಗಿದೆ. ಇದರ ಜೊತೆಗೆ ಮಿತ್ರ ಪಕ್ಷವಾದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಯ ಕೆಲವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. . ಬಿಜೆಪಿ ನಾಯಕರಲ್ಲಿ ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್, ಅವರ ಪುತ್ರ ಮತ್ತು ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಮತ್ತು ಹರಿಯಾಣದ ವಿದ್ಯುತ್ ಸಚಿವ ರಂಜಿತ್ ಸಿಂಗ್, ರಾನಿಯಾದ ಸ್ವತಂತ್ರ ಶಾಸಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌತಾಲಾ ಅವರು ಬ್ರಿಜ್ ಭೂಷಣ್ ವಿರುದ್ಧದ ಎಫ್‌ಐಆರ್‌ಗಳ ಆಧಾರದ ಮೇಲೆ ಸಾಧ್ಯವಾದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications