ರಾಜ್‌ಕೋಟ್: ಬೆಲ್ಟ್‌ನಿಂದ ಥಳಿಸಿ ದಲಿತ ವ್ಯಕ್ತಿಯ ಕೊಲೆ
ಅಹಮದಾಬಾದ್, ಮೇ 21: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಾರ್ಖಾನೆಯೊಂದರ ಕಾರ್ಮಿಕರು ದಲಿತ ವ್ಯಕ್ತಿಯೊಬ್ಬರನ್ನು ಹೊಡೆದು ಹತ್ಯೆ ಮಾಡಿದ್ದಾರೆ.
ಶಾಪರ್ ಕೈಗಾರಿಕಾ ವಲಯದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಗುತ್ತಿಗೆ ಕಾರ್ಮಿಕ ಮುಕೇಶ್ ಸಾವ್ಜಿ ವಾನಿಯಾ (40) ಎಂಬುವವರನ್ನು ಮೂವರು ಥಳಿಸಿ ಹತ್ಯೆ ಮಾಡುವ ವಿಡಿಯೋ ಸೌರಾಷ್ಟ್ರದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ತನಿಖೆ ಆರಂಭಿಸಿ ಐವರನ್ನು ಬಂಧಿಸಿದ್ದಾರೆ.
On video, Dalit man tied up, flogged in Gujarat. He died, wife critical https://t.co/l1BvgnjlSr pic.twitter.com/VQfViAbRxL
— NDTV (@ndtv) 21 May 2018
ಮುಕೇಶ್, ಪತ್ನಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ ಜತೆ ರಾದಾದಿಯಾ ಇಂಡಸ್ಟ್ರೀಸ್‌ನಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ಆಗ ಕಾರ್ಖಾನೆಯ ಕೆಲಸಗಾರರು ಈ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇಬ್ಬರು ಮಹಿಳೆಯರಿಗೂ ಥಳಿಸಿದ ಕಾರ್ಮಿಕರು ಅವರನ್ನು ಎಳೆದು ಹೊರಹಾಕಿದರು, ಬಳಿಕ ಮುಕೇಶ್‌ನನ್ನು ಫ್ಯಾಕ್ಟರಿಯ ಗೇಟ್‌ಗೆ ಕಟ್ಟಿಹಾಕಿ ಬೆಲ್ಟ್‌ನಿಂದ ಹಲ್ಲೆ ನಡೆಸಿದರು ಎಂಬುದಾಗಿ ಜಯಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಶಾಪರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಮೇಶ್ ಸಿಂಧು ತಿಳಿಸಿದರು.
ಮಹಿಳೆಯರನ್ನು ಹೊರಗೆ ಅಟ್ಟಿದ ಬಳಿಕ ಅವರು ಮುಕೇಶ್‌ನನ್ನು ರಕ್ಷಿಸಲು ಸಂಬಂಧಿಕರನ್ನು ಕರೆತರುವವರೆಗೂ ಮುಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜಕೋಟ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮುಕೇಶ್ ಮೃತಪಟ್ಟಿದ್ದಾರೆ. ಮುಕೇಶ್ ಪತ್ನಿ ಜಯಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಕೇಶ್‌ನನ್ನು ಕಳ್ಳ ಎಂದು ಭಾವಿಸಿ ಕಾರ್ಖಾನೆ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅದನ್ನು ಪೊಲೀಸರು ದೃಢಪಡಿಸಿಲ್ಲ.












Click it and Unblock the Notifications