ಉತ್ತರ ಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಮಳೆ: 34 ಸಾವು, ಉಕ್ಕಿ ಹರಿಯುತ್ತಿರುವ ನದಿಗಳು, ಜಲಾವೃತವಾದ ನಗರಗಳು
ನವದೆಹಲಿ, ಜುಲೈ 10: ಉತ್ತರ ಭಾರತದಲ್ಲಿ ವರುಣ ಆರ್ಭಟ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಈಗಾಗಲೇ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ನಗರಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿಗಳೆಲ್ಲ ಉಕ್ಕಿ ಹರಿಯುತ್ತಿವೆ ಎಂದು ವರದಿಯಾಗಿದೆ.
ಉತ್ತರ ಭಾರತದ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದೆ. ಕಟ್ಟಡ ಹಾಗೂ ಮನೆಗಳ ಮುಂದೆ ಮೊಣಕಾಲು ಮುಳುಗುವಷ್ಟು ನೀರು ನಿಂತಿರುವುದು ಕಂಡುಬಂದಿದೆ.
ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಜಮ್ಮು- ಕಾಶ್ಮೀರ, ರಾಜಸ್ಥಾನ, ದೆಹಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅವ್ಯವಸ್ಥೆಯ ಭಯಾನಕ ದೃಶ್ಯಗಳು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳು ಕಾಗದದ ದೋಣಿಗಳಂತೆ ತೇಲುತ್ತಿವೆ. ವಸತಿ ಪ್ರದೇಶಗಳಿಗೆ ಕೆಸರಿನ ನೀರು ನುಗ್ಗಿದೆ. ನದಿಗಳು ಪ್ರಳಯಾಂತಕವಾಗಿ ಹರಿಯುತ್ತಿವೆ. ಗುಡ್ಡುಗಳು ಕುಸಿಯುತ್ತಿವೆ. ಕಾರುಗಳು ಕೊಚ್ಚಿಹೋಗುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದ ಭೂಕುಸಿತಗಳು ಉಂಟಾಗಿವೆ. ಹಠಾತ್ ಪ್ರವಾಹ ಎದುರಾಗಿದೆ. ಇದರಿಂದ ಮನೆಗಳು ನೆಲಸಮವಾಗಿವೆ. ಜನರ ಜೀವನವು ಅಸ್ತವ್ಯಸ್ತಗೊಂಡಿದೆ.
ಮನಾಲಿ, ಕುಲು, ಕಿನ್ನೌರ್ ಮತ್ತು ಚಂಬಾದಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಕೆಲವು ಅಂಗಡಿಗಳು ಮತ್ತು ವಾಹನಗಳು ಕೊಚ್ಚಿಹೋಗಿವೆ. ರಾವಿ, ಬಿಯಾಸ್, ಸಟ್ಲುಜ್, ಸ್ವಾನ್ ಮತ್ತು ಚೆನಾಬ್ ಸೇರಿದಂತೆ ಎಲ್ಲಾ ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಿದೆ.
ಮುಂದಿನ 24 ಗಂಟೆಗಳ ಕಾಲ ಜನರು ಮನೆಯೊಳಗೆ ಇರುವಂತೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮನವಿ ಮಾಡಿದ್ದಾರೆ.

'ನಾನು ರಾಜ್ಯದ ಎಲ್ಲಾ ನಿವಾಸಿಗಳಿಗೆ ವಿನಂತಿಸಲು ಬಯಸುತ್ತೇನೆ. ದಯವಿಟ್ಟು ಮುಂದಿನ 24 ಗಂಟೆಗಳ ಕಾಲ ಮನೆಯಲ್ಲಿಯೇ ಇರಿ. ಏಕೆಂದರೆ ಭಾರೀ ಮಳೆಯ ನಿರೀಕ್ಷೆಯಿದೆ. ನಾವು ಮೂರು ಸಹಾಯವಾಣಿಗಳನ್ನು ಪ್ರಾರಂಭಿಸಿದ್ದೇವೆ. ಸಹಾಯಕ್ಕಾಗಿ ಕರೆ ಮಾಡಿ' ಎಂದು ಹೇಳಿದ್ದಾರೆ.
1100, 1070, 1077 ನಂಬರ್‌ಗಳನ್ನು ನೀಡುತ್ತಿದ್ದೇನೆ. ನೀವು ಯಾರ ಬಗ್ಗೆಯಾದರೂ ಮಾಹಿತಿಯನ್ನು ಹಂಚಿಕೊಳ್ಳಲು ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ನಿಮಗೆ ಸಹಾಯ ಮಾಡಲು ನಾನು ದಿನದ 24 ಗಂಟೆಯೂ ಲಭ್ಯವಿದ್ದೇನೆ' ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
'ಇಲ್ಲಿಯವರೆಗೆ ರಸ್ತೆ ಅಪಘಾತಗಳಲ್ಲಿ 20 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಜೀವಹಾನಿ ಹೆಚ್ಚಾಗಿಲ್ಲ. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲೆ ಮತ್ತು ಸಂಪರ್ಕ ರಸ್ತೆಗಳು ಸೇರಿದಂತೆ 1,300 ಕ್ಕೂ ಹೆಚ್ಚು ರಸ್ತೆಗಳು ಸಂಪೂರ್ಣ ಬಂದಾಗಿವೆ. ಮುಂದಿನ ಎರಡು ದಿನಗಳವರೆಗೆ ನಾವು ಹೈ ಅಲರ್ಟ್‌ನಲ್ಲಿದ್ದೇವೆ' ಎಂದು ಹಿಮಾಚಲ ಪ್ರದೇಶ ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದಾರೆ.
ನೆರೆಯ ಉತ್ತರಾಖಂಡದಲ್ಲೂ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ವರದಿಯಾಗಿದೆ. ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟವನ್ನು ದಾಟಿದೆ ಎಂದು ವರದಿಯಾಗಿದೆ.

ಭಾರೀ ಮಳೆಯಿಂದಾಗಿ ಜಲಾವೃತವಾಗಿರುವ ಕಾರಣ ಗುರುಗ್ರಾಮ ಮತ್ತು ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಟ್ರಾಫಿಕ್ ಜಾಮ್ ತಪ್ಪಿಸಲು ಕಾರ್ಪೊರೇಟ್ ಸಂಸ್ಥೆಗಳಿಗೆ ಇಂದು ಮನೆಯಿಂದಲೇ ಕೆಲಸ ಮಾಡುವಂತೆ ಗುರುಗ್ರಾಮ ಆಡಳಿತವು ಸಲಹೆ ನೀಡಿದೆ.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಪರಿಣಾಮವಾಗಿ ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ದೆಹಲಿ ಸರ್ಕಾರ 16 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ನಗರದಲ್ಲಿ ಮಳೆಯಿಂದ ಉಂಟಾಗಿರುವ ಜಲಾವೃತ ಮತ್ತು ಯಮುನಾ ನದಿಯ ನೀರಿನ ಮಟ್ಟಗಳ ಕುರಿತು ಮಾತುಕತೆ ನಡೆಸಲಾಯಿತು.
ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಒಂದು ಅಪಾಯ ಮಟ್ಟಕ್ಕಿಂತ ಹೆಚ್ಚು ಹರಿಯಲು ಆರಂಭಿಸಿದರೆ, ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಸ್ಥಗಿತಗೊಂಡ ನಂತರ ಅಮರನಾಥ ಯಾತ್ರೆಯು ಪಂಜತರ್ನಿ ಮತ್ತು ಶೇಷನಾಗ್ ಮೂಲ ಶಿಬಿರಗಳಿಂದ ಭಾನುವಾರ ಪುನರಾರಂಭವಾಯಿತು.
ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಭಾರಿ ನೀರು ತುಂಬಿಕೊಂಡಿದೆ. ಇದು ಪ್ರವಾಹಕ್ಕೆ ಕಾರಣವಾಗಿದೆ.












Click it and Unblock the Notifications