ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ಗಾಂಧಿ, ಜುಲೈ 30 ರಂದು ಡಿಸ್ಚಾರ್ಜ್ ಸಾಧ್ಯತೆ
ತಿರುವನಂತಪುರಂ, ಜುಲೈ. 28: 'ಭಾರತ್ ಜೋಡೋ ಯಾತ್ರೆ' ವೇಳೆ ಕಾಣಿಸಿಕೊಂಡಿದ್ದ ಮೊಣಕಾಲು ಸಂಬಂಧಿ ಸಮಸ್ಯೆಗೆ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ (ಜುಲೈ 30 ರಂದು) ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
"ರಾಹುಲ್ ಗಾಂಧಿಯವರನ್ನು ಮೊಣಕಾಲು ಸಂಬಂಧಿತ ಸಮಸ್ಯೆಗಾಗಿ ಜುಲೈ 21 ರಂದು ಕೇರಳದ ಕೊಟ್ಟಕ್ಕಲ್ ಆರ್ಯ ವೈದ್ಯ ಸಾಲಾಗೆ ದಾಖಲಿಸಲಾಗಿತ್ತು. ಅವರನ್ನು ಭಾನುವಾರ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ನಾಯಕರೊಬ್ಬರು ಕೋಝಿಕ್ಕೋಡ್‌ನಲ್ಲಿ ತಿಳಿಸಿದ್ದಾರೆ.

ಕೇರಳದ ಮಲಪ್ಪುರಂನಲ್ಲಿರುವ ಖ್ಯಾತ ಆಯುರ್ವೇದ ವೈದ್ಯ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ.ಪಿ.ಕೆ.ವಾರಿಯರ್ ಅವರ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರ ಜೊತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪಕ್ಷದ ಶಾಸಕ ಎ ಪಿ ಅನಿಲ್ ಕುಮಾರ್ ಇದ್ದರು.
ರಾಹುಲ್ ಗಾಂಧಿ ವೈದ್ಯ ಸಾಲಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಯಾಳಂನ ಖ್ಯಾತ ಬರಹಗಾರ, ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರನ್ನು ಭೇಟಿಯಾದರು. ಸಂವಾದದ ಸಮಯದಲ್ಲಿ, ವಾಸುದೇವನ್ ನಾಯರ್ ಅವರು ರಾಹುಲ್ ಗಾಂಧಿಗೆ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಳೆದ ವರ್ಷ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುವಾಗ ರಾಹುಲ್ ಗಾಂಧಿಯವರು ಮೊಣಕಾಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಹೀಗಾಗಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚನೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಸಮಾಲೋಚನೆಯಿಲ್ಲದೆ ಪಕ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಲು ಸಿದ್ಧರಿಲ್ಲ ಎಂದು ಹೇಳಲಾಗಿದೆ.

ಕಾಲೇಜು ದಿನಗಳಲ್ಲಿ ಫುಟ್ಬಾಲ್ ಪ್ರೇಮಿಯಾಗಿದ್ದ ರಾಹುಲ್ ಗಾಂಧಿ ಮೊಣಕಾಲಿನ ಗಂಭೀರ ಗಾಯಕ್ಕೆ ಒಳಗಾಗಿದ್ದರು ಮತ್ತು ಈ ಕಾರಣದಿಂದಾಗಿ ಅವರು ಸಾಕರ್ ಆಡುವುದನ್ನು ಬಿಡಬೇಕಾಯಿತು. ಚಿಕಿತ್ಸೆಯ ಹೊರತಾಗಿಯೂ, ಗಾಯವು ಕೆಲವೊಮ್ಮೆ ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ನೋವುಂಟುಮಾಡುತ್ತದೆ ಎನ್ನಲಾಗಿದೆ. 'ಭಾರತ್ ಜೋಡೋ ಯಾತ್ರೆ' ಸಮಯದಲ್ಲಿ ಮತ್ತೆ ನೋವುಂಟಾಗಿದೆ. ಇದು 4,000 ಕಿಮೀ ಯಾತ್ರೆ ಮುಗಿದ ನಂತರ ಇದು ಸಾರ್ವಜನಿಕವಾಗಿ ಬಹಿರಂಗವಾಗಿದೆ.
ಇದಾದ ನಂತರ ರಾಹುಲ್ ಗಾಂಧಿ ಅವರು ಪ್ರಮುಖ ಆಯುರ್ವೇದ ವೈದ್ಯರ ಬಳಿಗೆ ಹೋಗಲು ನಿರ್ಧರಿಸಿದರು ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ಬಳಿಕ ಕಾಂಗ್ರೆಸ್ ನಾಯಕರು ಕೇರಳಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications