Rahul Gandhi: ತಾಯಿಯ ಕ್ಷೇತ್ರ ಉಳಿಸಿಕೊಂಡು ವಯನಾಡು ಬಿಡ್ತಾರೆ ರಾಹುಲ್! ಹಾಗಾದ್ರೆ ಕೇರಳ ಸೀಟು ಯಾರ ಪಾಲು?
ತಿರುವನಂತಪುರಂ, ಜೂನ್. 06: ಸಕ್ರಿಯ ರಾಜಕೀಯ ತ್ಯಜಿಸುವಂಥ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕೆ ಮುರಳೀಧರನ್ ಅವರನ್ನು ಸಮಾಧಾನಪಡಿಸಲು ಪಕ್ಷ ಹೊಸ ಕ್ರಮ ಕೈಗೊಳ್ಳುತ್ತಿದೆ. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ಬರೇಲಿಯ ಕುಟುಂಬದ ಸ್ಥಾನವನ್ನು ಉಳಿಸಿಕೊಂಡು ವಯನಾಡ್ ಅನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಹೀಗಾಗಿ ಈ ಸ್ಥಾನವನ್ನು ಅವರಿಗೆ ನೀಡಲು ಯೋಚಿಸಲಾಗಿದೆ.
ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ ಕೆ ಮುರುಳೀಧರನ್ ಅವರನ್ನು ಸಮಾಧಾನಪಡಿಸುವುದು ಮತ್ತು ಚುನಾವಣಾ ಫಲಿತಾಂಶದ ಅವಲೋಕನಕ್ಕಾಗಿ ಪಕ್ಷದ ಸಭೆಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳುವುದು ಕೇರಳ ಕಾಂಗ್ರೆಸ್‌ನ ಮೊದಲ ಆದ್ಯತೆಯಾಗಿದೆ. ಇದೆ ಕಾರಣಕ್ಕೆ ವಯನಾಡು ಕ್ಷೇತ್ರವನ್ನು ಅವರಿಗೆ ನೀಡಲು ಚಿಂತಿಸಲಾಗುತ್ತಿದೆ. ಜೂನ್ 10 ರಂದು ಕೇರಳ ವಿಧಾನಸಭೆ ಅಧಿವೇಶನ ಪ್ರಾರಂಭವಾಗುವ ಮುನ್ನ ಅವರನ್ನು ಸಕ್ರಿಯ ರಾಜಕಾರಣದಲ್ಲಿ ಕಟ್ಟಿಹಾಕಲು ಚಿಂತಿಸುತ್ತಿದೆ.

ಪ್ರಿಯಾಂಕಾ ಗಾಂಧಿ ಇಲ್ಲದಿದ್ದರೇ ಮುರಳೀಧರನ್!
ಈಗಾಗಲೇ ರಾಹುಲ್ ಗಾಂಧಿ ರಾಯ್‌ಬರೇಲಿಯನ್ನು ಉಳಿಸಿಕೊಳ್ಳು ಯೋಚಿಸುತ್ತಿರುವ ಬಗ್ಗೆ ಹಲವು ಚರ್ಚೆಗಳಾಗುತ್ತಿವೆ. ಕಳೆದ ಬಾರಿ ವಯನಾಡಿನಿಂದ ಸಂಸದರಾಗಿದ್ದ ಅವರು, ತಮ್ಮ ಅಜ್ಜಿ ಮತ್ತು ತಾಯಿಯ ಕ್ಷೇತ್ರ ಉತ್ತರ ಪ್ರದೇಶದ ರಾಯ್‌ಬರೇಲಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹಿಂದಿ ಮತದಾರರಿರುವ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜೀವ ತರುವ ಕೆಲಸಕ್ಕಾಗಿ ರಾಹುಲ್ ಈ ನಿರ್ಧಾರ ಕೈಗೊಂಡಿದ್ದಾರೆ.
ಹೀಗಾಗಿ ವಯನಾಡು ಉಪಚುನಾವಣೆಯಲ್ಲಿ ಒಂದು ವೇಳೆ ಪ್ರಿಯಾಂಕಾ ಗಾಂಧಿ ಅವರು ವಯನಾಡ್‌ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರದಿದ್ದರೆ, ಮುರಳೀಧರನ್ ಅವರು ಅಲ್ಲಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಅನಿರೀಕ್ಷಿತ ಸೋಲಿನಿಂದ ಆಘಾತಕ್ಕೊಳಗಾಗಿರುವ ಅವರನ್ನು ಸಮಾಧಾನ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮುರಳೀಧರನ್ ಅವರು ಈ ಬಾರಿಯೂ ವಡಕರ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲ್ಲುತ್ತಿದ್ದೆ ಎಂದು ಹೇಳಿದ್ದಾರೆ. ಬಳಿಕ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಸ್ವಲ್ಪ ಸಮಯದವರೆಗೆ ಸಾರ್ವಜನಿಕ ಜೀವನದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ.

ಕಳೆದ 36 ಗಂಟೆಗಳಲ್ಲಿ ಮುರಳೀಧರನ್‌ಗೆ ಸಾಂತ್ವನ ಹೇಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಪರಸ್ಪರ ಪೈಪೋಟಿ ನಡೆಸಿದ್ದಾರೆ. ಆದರೆ, ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಸೇರಿದಂತೆ ಯಾವುದೇ ಭರವಸೆಯನ್ನು ಕಾಂಗ್ರೆಸ್ ರಾಜ್ಯ ನಾಯಕತ್ವವು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ತ್ರಿಶೂರ್‌ನಲ್ಲಿ ಬಿಜೆಪಿಯ ಸುರೇಶ್ ಗೋಪಿ ಮುನ್ನಡೆ ನಡುವೆಯೂ ಮುರಳೀಧರನ್ ಅವರು ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಮತದಾರರ ಬೆಂಬಲವನ್ನು ನಿರೀಕ್ಷಿಸಿದ್ದರಿಂದ ತ್ರಿಶೂರ್‌ನಿಂದ ಗೆಲ್ಲುವ ಭರವಸೆಯನ್ನು ಹೊಂದಿದ್ದರು. ಆದರೆ, ಸಿಪಿಎಂ ಭದ್ರಕೋಟೆ ಎಂದು ಕರೆಯಲ್ಪಡುವ ಒಲ್ಲೂರು ಮತ್ತು ಮಡಕತ್ತಾರದಲ್ಲಿ ಸುರೇಶ್ ಗೋಪಿ ಮುನ್ನಡೆ ಸಾಧಿಸಿದ್ದರಿಂದ ಅವರು ಸ್ವ ಪಕ್ಷದ ಮೇಲೆ ಆರೋಪ ಮಾಡಿದ್ದರು.
ಇತ್ತೀಚೆಗೆ ಬಿಜೆಪಿಗೆ ಸೇರಿರುವ ಕಾಂಗ್ರೆಸ್ ಮುಖಂಡ ದಿವಂಗತ ಕೆ ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು, ತ್ರಿಶೂರ್‌ನಲ್ಲಿ ಎನ್‌ಡಿಎ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಂಜಿಲ್ಲಾ ಕಾಂಗ್ರೆಸ್ ಸಮಿತಿಯ ನಾಯಕರ ಗುಂಪು ನನ್ನನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications