ಮಧ್ಯಪ್ರದೇಶ ಚುನಾವಣೆ: ರಾಜ್ಯದಲ್ಲಿ ಬೃಹತ್ ಬದಲಾವಣೆಯ ಅಲೆ ಕಾಣಿಸಿಕೊಂಡಿದೆ ಎಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ಭೋಪಾಲ್, ಜುಲೈ. 21: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಧಾನಸಭೆ ಚುನಾವಣೆಯ ಎರಡನೇ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೇಂದ್ರ ಸಚಿವ ಮತ್ತು ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ತವರು ಗ್ವಾಲಿಯರ್‌ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ವಾಲಿಯರ್ ಸಭೆಗೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಬುಂದೇಲಿ ಭಾಷೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದಿಂಬಿಸಿದ್ದಾರೆ. "ಶಿವರಾಜ್ ಸಿಂಗ್ ಚೌಹಾಣ್ ಅವರ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಗ್ವಾಲಿಯರ್ - ಚಂಬಲ್ ಜನರು ನನ್ನೊಂದಿಗೆ ಸೇರುತ್ತಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮನೆಗೆ ಹೋಗಲಿದ್ದು, ಕಾಂಗ್ರೆಸ್ ಅಧಿಖಾರಕ್ಕೆ ಬರಲಿದೆ ಎಂದಿದ್ದಾರೆ.

ಬುಂದೇಲಿ ಭಾಷೆಯಲ್ಲಿ ಭಾಷಣವನ್ನು ಪ್ರಾರಂಭಿಸಿದ ಅವರು, ಗ್ವಾಲಿಯರ್-ಚಂಬಲ್ ಪ್ರದೇಶಕ್ಕೆ ಬಂದಿದ್ದಕ್ಕಾಗಿ ತಾನು ಉತ್ಸಾಹದಲ್ಲಿದ್ದೇನೆ. ನಾನು ಈ ಹಿಂದೆಯೂ ಪೀತಾಂಬರ ದೇವಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಈ ಭೂಮಿಗೆ ಬಂದಿದ್ದೇನೆ. ಈ ಹಿಂದೆ ನನ್ನ ಅಜ್ಜಿ ಇಂದಿರಾಗಾಂಧಿ ಕೂಡ ನಿಮ್ಮ ಜಾಗಕ್ಕೆ ಬಂದಿದ್ದರು. ನನ್ನ ಬಾಲ್ಯದಲ್ಲಿ ರಾಣಿ ಲಕ್ಷ್ಮೀಬಾಯಿ ಮತ್ತು ಈ ನೆಲದ ಇತರ ಧೈರ್ಯಶಾಲಿಗಳ ಸ್ಪೂರ್ತಿದಾಯಕ ಕಥೆಗಳನ್ನು ನಾನು ನನ್ನ ಅಜ್ಜಿಯಿಂದ ಕೇಳಿದ್ದೇನೆ." ಎಂದು ಹೇಳಿದ್ದಾರೆ.
2020ರ ಮಾರ್ಚ್‌ನಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗಿನ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್ ನಾಯಕರು ಬಿಜೆಪಿಯ ನೆರವಿನಿಂದ ಉರುಳಿಸಿದ ಪ್ರಿಯಾಂಕಾ ಗಾಂಧಿ, "ನಾನು ಇಲ್ಲಿ ಬದಲಾವಣೆಯ ದೊಡ್ಡ ಅಲೆಯನ್ನು ನೋಡುತ್ತೇನೆ. ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿ. ಯಾರಿಗೂ ಕೊಳ್ಳಲೂ ಆಗದ, ಬೀಳಿಸಲೂ ಆಗದಂತಹ ಬಲಿಷ್ಠ ಸರಕಾರವನ್ನು ರೂಪಿಸಿ ಎಂದು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ" ಎಂದಿದ್ದಾರೆ.
"ನನಗೆ ಕೆಟ್ಟ ರಾಜಕೀಯದಲ್ಲಿ ಪಾಲ್ಗೊಳ್ಳಲು ಆಸೆಯಿಲ್ಲ. ಇಲ್ಲದಿದ್ದರೆ ನಾನು ನನ್ನ 30 ನಿಮಿಷಗಳ ಭಾಷಣದಲ್ಲಿ 10 ನಿಮಿಷಗಳನ್ನು ಪ್ರಧಾನಿಯನ್ನು ಟೀಕಿಸಲು ಕಳೆಯುತ್ತಿದ್ದೆ. ಮುಂದಿನ 10 ನಿಮಿಷಗಳನ್ನು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಹಗರಣಗಳು/ಸುಳ್ಳು ಭರವಸೆಗಳಿಗೆ ಮೀಸಲಿಡಲಾಗುತ್ತಿತ್ತು ಮತ್ತು ಕೊನೆಯ 10 ನಿಮಿಷಗಳಲ್ಲಿ ನಾನು ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ರಾಜಕೀಯ ಸಿದ್ಧಾಂತವು ಹೇಗೆ ಇದ್ದಕ್ಕಿದ್ದಂತೆ ಯು-ಟರ್ನ್ ತೆಗೆದುಕೊಂಡಿತು ಎಂಬುದರ ಕುರಿತು ಮಾತನಾಡುತ್ತಿದ್ದೆ" ಎಂದು ಹೇಳಿದ್ದಾರೆ.

ಮಾರ್ಚ್ 2020 ರ ಕಮಲ್ ನಾಥ್ ಸರ್ಕಾರದ ಪತನವನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, "ಮಧ್ಯಪ್ರದೇಶದ ಪ್ರಸ್ತುತ ಸರ್ಕಾರದ ಅಡಿಪಾಯವು ಅನೈತಿಕವಾಗಿದೆ. ಏಕೆಂದರೆ ಅದು ಹಣದ ಬಲದಿಂದ ಚುನಾಯಿತ ಸರ್ಕಾರವನ್ನು ಬೀಳಿಸುವ ಮೂಲಕ ರಚಿಸಲಾಗಿದೆ. ಯಾವುದೇ ಸರ್ಕಾರದ ಅಡಿಪಾಯ ತಪ್ಪು ಮತ್ತು ಅನೈತಿಕವಾಗಿದ್ದರೆ, ಅದರ ಕೆಲಸಗಳು ಸಹ ಅದೇ ಆಗಿರುತ್ತವೆ. ಅದೇ ರೀತಿ ಪ್ರಸ್ತುತ ಸರ್ಕಾರವು ಲೂಟಿ ಮತ್ತು ಹಗರಣಗಳ ಮೇಲೆ ಕೇಂದ್ರೀಕರಿಸಿದೆ. ರಸ್ತೆಗಳಿಂದ ಹಿಡಿದು ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿರುವ ಪ್ರತಿಮೆಗಳವರೆಗೆ ವ್ಯಾಪಿಸಿದೆ" ಎಂದು ಕಿಡಿಕಾರಿದ್ದಾರೆ.
ಮಧ್ಯಪ್ರದೇಶದಲ್ಲಿ ಪಕ್ಷದ ಐದು ಚುನಾವಣಾ ಖಾತರಿಗಳನ್ನು ಪುನರುಚ್ಚರಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ, ಮಹಿಳೆಯರಿಗೆ ಮಾಸಿಕ 1500 ರೂ., ರೂ. 500 ಎಲ್‌ಪಿಜಿ ಅಡುಗೆ ಸಿಲಿಂಡರ್, ಹಿಂದಿನ ಕಾಂಗ್ರೆಸ್ ಆಡಳಿತದ ಕೃಷಿ ಸಾಲ ಮನ್ನಾ ಮತ್ತು ಉಚಿತ 100 ಯೂನಿಟ್ ಮತ್ತು 200 ಯೂನಿಟ್ ವಿದ್ಯುತ್‌ಗೆ ರೂ 100 ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಂಗವಿಕಲರಿಗೆ ಪಿಂಚಣಿಗಾಗಿ ಪ್ರಸ್ತುತ ಮಾಸಿಕ 600 ರೂ.ಗಳನ್ನು ಹೆಚ್ಚಿಸುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಗರಿಷ್ಠ ರಕ್ಷಣಾ ಸಿಬ್ಬಂದಿ ಗ್ವಾಲಿಯರ್-ಚಂಬಲ್ ಪ್ರದೇಶದಿಂದ ತೆರಳಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ದೇಶದ ಸಶಸ್ತ್ರ ಪಡೆಗಳಿಗೆ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾಗುವ ಅಗ್ನಿವೀರ್ ಯೋಜನೆ ಕುರಿತು ಪ್ರಸ್ತಾಪಿಸಿದ್ದಾರೆ. "ನಾನು ಇತ್ತೀಚೆಗೆ ಹರಿಯಾಣದಲ್ಲಿ ಯುವಕರನ್ನು ಭೇಟಿಯಾದೆ. ಅಗ್ನಿವೀರ್ ಯೋಜನೆಯಡಿಯಲ್ಲಿನ ಕಠಿಣ ತರಬೇತಿಯ ಮಧ್ಯದಲ್ಲಿ ಅನೇಕ ಯುವಕರು ಮನೆಗೆ ಮರಳುತ್ತಿದ್ದಾರೆ. ಕೃಷಿಯ ಮೇಲೆ ಅವಲಂಬಿತರಾಗಿ ಮನೆಗೆ ಹಿಂದಿರುಗುವ ಮೊದಲು ಅವರು ಕೇವಲ ನಾಲ್ಕು ವರ್ಷಗಳವರೆಗೆ ಉದ್ಯೋಗವನ್ನು ಹೊಂದಿರುವಾಗ ಅಂತಹ ತರಬೇತಿಯನ್ನು ಪಡೆಯುವುದರಿಂದ ಏನು ಪ್ರಯೋಜನ ಎಂದು ನನ್ನನ್ನು ಪ್ರಶ್ನಿಸಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಸರ್ಕಾರಿ ನೇಮಕಾತಿ ಪರೀಕ್ಷೆಯನ್ನು ಪಾಸ್ ಮಾಡಲು ಖಾಸಗಿ ಕೋಚಿಂಗ್ ಮತ್ತು ಟ್ಯೂಷನ್‌ಗಳಿಗಾಗಿ ಅವರ ಕುಟುಂಬವು 10,000 ರಿಂದ 20,000 ರೂಪಾಯಿಗಳನ್ನು ಖರ್ಚು ಮಾಡಿದೆ. ಇಂತಹವರು ಕೂಡ ಇತ್ತೀಚೆಗೆ ನಡೆದ ಮಧ್ಯಪ್ರದೇಶದ ಪಟ್ವಾರಿ ನೇಮಕಾತಿ ಪರೀಕ್ಷೆಯಲ್ಲಿ ಹಗರಣದಿಂದ ವಂಚಿತರಾಗಿದ್ದಾರೆ" ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
"ಹಣದುಬ್ಬರ ಮತ್ತು ನಿರುದ್ಯೋಗ ಪ್ರಮುಖ ಸಾರ್ವಜನಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಇಂತಹ ಸಮಸ್ಯೆಗಳು ಉದ್ವಿಗ್ನತೆಯನ್ನು ಉಂಟುಮಾಡುತ್ತವೆ. ಇದು ಆದಿವಾಸಿಗಳು, ದಲಿತರು ಮತ್ತು ಮಹಿಳೆಯರು ಸೇರಿದಂತೆ ದುರ್ಬಲ ವರ್ಗಗಳ ಮೇಲೆ ದೌರ್ಜನ್ಯಕ್ಕೆ ಕಾರಣವಾಗುತ್ತದೆ. ಮಧ್ಯಪ್ರದೇಶದಲ್ಲಿ ಆಗುತ್ತಿರುವುದು ಇದೇ. ಇಲ್ಲಿನ ಪತ್ರಿಕೆಗಳು ಪ್ರಮುಖವಾಗಿ ಒಂದು ಕಡೆ ಸರ್ಕಾರಿ ಜಾಹೀರಾತುಗಳನ್ನು ಪ್ರಕಟಿಸುತ್ತವೆ ಮತ್ತು ಇನ್ನೊಂದೆಡೆ ಬಿಜೆಪಿ ನಾಯಕರ ಪುತ್ರರಿಂದ ಅತ್ಯಾಚಾರ ಮತ್ತು ಕಿರುಕುಳಕ್ಕೆ ಒಳಗಾಗುವ ಮಹಿಳೆಯರು/ಬಾಲಕಿಯರ ಸುದ್ದಿಗಳನ್ನು ಪ್ರಕಟಿಸುತ್ತವೆ" ಎಂದು ಹೇಳಿದ್ದಾರೆ.
ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಮಧ್ಯಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ಕಳೆದ ಮೂರು ವರ್ಷಗಳಲ್ಲಿ ಸಿಎಂ ಮಾಡಿದ 22,000 ಘೋಷಣೆಗಳಲ್ಲಿ 2200 ಸಹ ಏಕೆ ಈಡೇರಿಸಲಿಲ್ಲ..? ಈಗ ಮಹಿಳೆಯರು ಮತ್ತು ಯುವಕರಿಗೆ ಯೋಜನೆಗಳನ್ನು ಏಕೆ ಘೋಷಿಸುತ್ತಿದ್ದಾರೆ? 18 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅವರು ಮತ್ತು ಅವರ ಪಕ್ಷ ಏನು ಮಾಡುತ್ತಿದೆ?" ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications