Delhi Stampede: ದೆಹಲಿ ರೈಲು ನಿಲ್ದಾಣ ಕಾಲ್ತುಳಿತ ದುರಂತ; ಪ್ರಧಾನಿ ನರೇಂದ್ರ ಮೋದಿ ಸಂತಾಪ
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಮಹಾದುರಂತವೊಂದು ನಡೆದುಹೋಗಿದೆ. ಮಹಾ ಕುಂಭ ಮೇಳಕ್ಕೆ ತೆರಳುವ ಎರಡು ರೈಲುಗಳು ವಿಳಂಭವಾದ ಕಾರಣ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಸೇರಿ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14ನೇ ಫ್ಲಾಟ್‌ಫಾರ್ಮ್‌ಗೆ ಬರಬೇಕಿದ್ದ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ತಡವಾಗಿದೆ. ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ್ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಕೂಡ ನವ ದೆಹಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವುದು ತಡವಾಗಿದೆ. ಇದರಿಂದ 12, 13 ಮತ್ತು 14ನೇ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದ್ದು ಕಾಲ್ತುಳಿತ ಉಂಟಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ
ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. "ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಘಟನೆ ಬಗ್ಗೆ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಜೊತೆ ನಾನಿದ್ದೇನೆ. ಗಾಯಗೊಂಡಿರುವವರು ಬೇಗನೆ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. "ನವದೆಹಲಿ ರೈಲು ನಿಲ್ದಾಣದಿಂದ ಆಘಾತಕಾರಿ ಸುದ್ದಿ ಬಂದಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್ತುಳಿತದಿಂದ ಉಂಟಾದ ಜೀವಹಾನಿಯಿಂದ ನನಗೆ ತುಂಬಾ ನೋವಾಗಿದೆ. ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಯಾಣಿಕರ ದಟ್ಟಣೆ, ಇಲ್ಲದ ಸಮಯಪ್ರಜ್ಞೆ
12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದಾರೆ. ಫೆಬ್ರವರಿ 26ರಂದು ಮಹಾಕುಂಭಮೇಳ ಕೊನೆಯಾಗಲಿದ್ದು, ಹೆಚ್ಚಿನ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮಕ್ಕೆ ತೆರಳುತ್ತಿದ್ದಾರೆ.
ದೇಶದ ಎಲ್ಲಾ ಭಾಗಗಳಿಂದ ಪ್ರಯಾಗ್‌ರಾಜ್‌ಗೆ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದು ಅಧಿಕಾರಿಗಳು ಪರದಾಡುವಂತಾಗಿದೆ.
ಈ ವಾರದ ಆರಂಭದಲ್ಲಿ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದ ನಂತರ ಪ್ರಯಾಗ್‌ರಾಜ್ ಮೂಲಕ ದೆಹಲಿಗೆ ಹೋಗುವ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ನ ಗಾಜುಗಳನ್ನು ಒಡೆದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ನವದೆಹಲಿ ರೈಲು ನಿಲ್ದಾಣದಲ್ಲಿನ ಅವ್ಯವಸ್ಥೆ ಬಗ್ಗೆ ದೆಹಲಿ ಮಾಜಿ ಸಿಎಂ ಅತಿಶಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಹಾಕುಂಭಮೇಳಕ್ಕೆ ಮತ್ತಷ್ಟು ಭಕ್ತರು ಬರಬೇಕಿದ್ದು, ಮಹಾಕುಂಭದ ಸಮಯವನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ದುರಂತಕ್ಕೆ ಮುಖ್ಯ ಕಾರಣ ರೈಲುಗಳು ನಿಲ್ದಾಣಕ್ಕೆ ಬರುವುದು ವಿಳಂಬವಾಗಿದ್ದು ಒಂದು ವೇಳೆ ರೈಲುಗಳು ಸಮಯಕ್ಕೆ ಸರಿಯಾಗಿ ಬಂದಿದ್ದರೆ ಜನದಟ್ಟಣೆ ಹೆಚ್ಚುತ್ತಲೇ ಇರಲಿಲ್ಲ. ಸಮಯಪ್ರಜ್ಞೆ ಪಾಲನೆ ಮಾಡದೇ ಇರುವುದು 16 ಜೀವಗಳನ್ನು ಬಲಿ ಪಡೆದಿದೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.












Click it and Unblock the Notifications