ಲಂಡನ್‌ನಲ್ಲಿ ದೇಶಕ್ಕೆ ಅವಮಾನ ಮಾಡಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಸದನದಲ್ಲಿ ಪ್ರಲ್ಹಾದ್ ಜೋಶಿ ಕಿಡಿ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಂಡನ್ ಭಾಷಣದ ಬಗ್ಗೆ ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ನವದೆಹಲಿ, ಮಾರ್ಚ್ 13: ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿದೇಶಗಳಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ಸೋಮವಾರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವ ಪ್ರಲ್ಹಾದ್ ಜೋಶಿ, 'ಭಾರತದ ಪ್ರಜಾಪ್ರಭುತ್ವ ಸೇರಿದಂತೆ ದೇಶದ ಆಂತರಿಕ ವಿಚಾರಗಳ ಬಗ್ಗೆ ವಿದೇಶ ಶಕ್ತಿಗಳ ಮುಂದೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಸದನದಲ್ಲಿ ವಿಪಕ್ಷಗಳ ಮೈಕ್ ಗಳು ಆಫ್ ಮಾಡಿ ಪ್ರತಿಪಕ್ಷಗಳ ಧ್ವನಿಯನ್ನ ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆಯ ಸ್ಪೀಕರ್ ವಿರುದ್ಧವೇ ರಾಹುಲ್ ಗಾಂಧಿ ವಿದೇಶಗಳ ನೆಲದಲ್ಲಿ ಮಾತಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.

"ಸದನದಲ್ಲಿ ಯಾವತ್ತು ವಿಪಕ್ಷಗಳ ಮೈಕ್ ಆಫ್ ಆಗಿಲ್ಲ. ಆಧಾರ ರಹಿತ ಆರೋಪವನ್ನ ವಿದೇಶಗಳಲ್ಲಿ ರಾಹುಲ್ ಗಾಂಧಿ ಮಾಡಿದ್ದು, ಸದನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿ ಅವರು ಸದನಕ್ಕೆ ಬಂದು ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ವಿಪಕ್ಷಗಳ ನಾಯಕರನ್ನ ಬಂಧಿಸಿದ್ದರು. ಆಗ ಪ್ರಜಾಪ್ರಭುತ್ವವಿತ್ತೇ? ಎಂದು ಸದನದಲ್ಲಿ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಸದಸ್ಯರನ್ನ ಪ್ರಶ್ನಿಸಿದ್ದಾರೆ.
ಮುಂದುವರಿದು, "ಮೊದಲನೆಯದಾಗಿ ಪ್ರಜಾಪ್ರಭುತ್ವಕ್ಕೆ ರಾಹುಲ್ ಗಾಂಧಿ ಅವರೇ ಸರಿಯಾಗಿ ಮನ್ನಣೆ ನೀಡಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಚಿವ ಸಂಪುಟ ತೆಗೆದುಕೊಂಡ ಸುಗ್ರೀವಾಜ್ಞೆಯನ್ನ ರಾಹುಲ್ ಗಾಂಧಿ ಮಾಧ್ಯಮಗಳ ಎದುರು ಹರಿದು ಹಾಕಿದ್ದರು. ಸಂಪುಟದ ನಿರ್ಧಾರವನ್ನ ನಾನ್ಸೆನ್ಸ್ ಎಂದಿದ್ದರು. ಅಂಥಹ ವ್ಯಕ್ತಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ವಿದೇಶಿ ನೆಲಗಳಲ್ಲಿ ಹೋಗಿ ಮಾತಾಡುವ ಯಾವ ಅರ್ಹತೆಯೂ ಇಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
"ವಿಶ್ವಗುರು ಬಸವಣ್ಣ ಅವರು ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲಿಯೇ ದೇಶದಲ್ಲಿ ಪ್ರಜಾಪ್ರಭುತ್ವವನ್ನ ಜಾರಿಗೆ ತರಲು ಪ್ರಯತ್ನಿಸಿದವರು. ಬಸವಣ್ಣ ಅವರ ಪ್ರಜಾಪ್ರಭುತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿ ಮಾತಾಡಿ ದೇಶದ ಗೌರವ ಹೆಚ್ವಿಸುತ್ತಾರೆ. ಬಸವಣ್ಣ ಅವರ ಪ್ರತಿಮೆಯನ್ನ ಲಂಡನ್ ನಲ್ಲಿ ಸ್ಥಾಪಿಸಲಾಗಿದೆ. ಆದ್ರೆ ರಾಹುಲ್ ಗಾಂಧಿ ಅದೇ ಲಂಡನ್ ಗೆ ಹೋಗಿ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಇವರಿಗೆ ನಾಚಿಕೆಯಾಗಬೇಕು" ಎಂದಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಂಡನ್ ಭಾಷಣದ ಬಗ್ಗೆ ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. "ಈ ಸದನದ ಸದಸ್ಯರಾಗಿರುವ ರಾಹುಲ್ ಗಾಂಧಿ ಲಂಡನ್‌ನಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಗಳನ್ನು ಈ ಸದನದ ಎಲ್ಲಾ ಸದಸ್ಯರು ಖಂಡಿಸಬೇಕು. ಸದನದ ಮುಂದೆ ಕ್ಷಮೆಯಾಚಿಸಲು ಅವರ ಮೇಲೆ ಒತ್ತೆ ಹೇರಬೇಕು ಎಂದು ನಾನು ಒತ್ತಾಯಿಸುತ್ತೇನೆ" ಎಂದು ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದರು.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪಿಯೂಷ್ ಗೋಯಲ್ ಕೂಡ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. "ಪ್ರಮುಖ ವಿರೋಧ ಪಕ್ಷದ ನಾಯಕ ವಿದೇಶಕ್ಕೆ ಹೋಗಿ ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಾರೆ. ಅವರು ಭಾರತದ ಜನರನ್ನು ಮತ್ತು ಸಂಸತ್ತನ್ನು ಅವಮಾನಿಸಿದ್ದಾರೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯವಿದೆ. ಸಂಸದರು ಸಂಸತ್ತಿನಲ್ಲಿ ಮಾತನಾಡಬಹುದು. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು' ಎಂದು ಪಿಯೂಷ್ ಗೋಯಲ್ ಆಗ್ರಹಿಸಿದ್ದಾರೆ.












Click it and Unblock the Notifications