Petrol & Diesel Price: ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ!
ಪೆಟ್ರೋಲ್-ಡೀಸೆಲ್ ದರ ಹೆಚ್ಚಳದಿಂದ ಬೇಸತ್ತಿರುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಕೆಲವು ದಿನಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗುವ ಸೂಚನೆ ಸಿಕ್ಕಿದೆ. ಮಾರ್ಚ್‌ನಲ್ಲಿ 83-84 ಯುಎಸ್ ಡಾಲರ್ ಇದ್ದ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ ಸೆಪ್ಟೆಂಬರ್‌ನಲ್ಲಿ 74 ಯುಎಸ್ ಡಾಲರ್ ಗೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆಯಾಗಬಹುದು ಎಂದು ಐಸಿಆರ್‍ಎ ಅಂದಾಜಿಸಿದೆ.
ಕೆಲವು ವಾರಗಳಿಂದ ತೈಲ ಮಾರಾಟ ಕಂಪನಿಗಳ ಲಾಭದ ಮಾರ್ಜಿನ್ ಸುಧಾರಣೆಯಾಗಿದ್ದು, ಮಾರಾಟಗಾರರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕನಿಷ್ಠ 2 ರಿಂದ 3 ರೂಪಾಯಿಗಳು ಕಡಿಮೆ ಮಾಡುವ ಅವಕಾಶವಿದೆ ಎಂದು ಐಸಿಆರ್‍ಎ ಹೇಳಿದೆ.

ಕಚ್ಚಾತೈಲ ಬೆಲೆ ಇಳಿಕೆಯಾಗಿರುವುದು ಪೆಟ್ರೋಲ್, ಡೀಸೆಲ್ ದರ ಇಳಿಕೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಮಾರ್ಚ್ 2024ರಲ್ಲಿ ಭಾರತದಲ್ಲಿ ಕೊನೆಯ ಬಾರಿಕೆ ಪೆಟ್ರೋಲ್, ಡೀಸೆಲ್ ದರವನ್ನು 2 ರೂಪಾಯಿ ಕಡಿಮೆ ಮಾಡಿದೆ.
ಐಸಿಆರ್‍ಎ ಉಪಾಧ್ಯಕ್ಷ ಗಿರೀಶ್ ಕುಮಾರ್ ಕದಂ ಎನ್ನುವವರು ಬೆಲೆ ಇಳಿಕೆ ಸಾಧ್ಯತೆ ಬಗ್ಗೆ ಅಭಿಪ್ರಾಯ ನೀಡಿದ್ದು, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಹೋಲಿಕೆ ಮಾಡಿದರೆ ಸದ್ಯ ಲೀಟರ್ ಪೆಟ್ರೋಲ್ 15 ರೂಪಾಯಿ ಮತ್ತು ಡೀಸೆಲ್ ಬೆಲೆ 12 ರೂಪಾಯಿ ಹೆಚ್ಚಾಗಿದೆ. ಕಚ್ಚಾತೈಲದ ಬೆಲೆ ಹೀಗೆ ಸ್ಥಿರವಾಗಿದ್ದರೆ ಚಿಲ್ಲರೆ ಮಾರಾಟದಲ್ಲಿ 2-3 ರೂಪಾಯಿ ಕಡಿತವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 5ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಸಿಎಲ್‌ಎಸ್‌ಎ ತೈಲ ಕಾರ್ಯದರ್ಶಿ ಪಂಕಜ್ ಜೈನ್ ಹೇಳಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಮತದಾರರನ್ನು ಸೆಳೆಯುವ ಭಾಗವಾಗಿ, ಎನ್‌ಡಿಎ ಸರ್ಕಾರ ತೈಲ ಬೆಲೆ ಇಳಿಕೆ ಬಗ್ಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.
ಅಬಕಾರಿ ಸುಂಕ ಹೆಚ್ಚಳ?
ಕಚ್ಚಾತೈಲ ದರ ಕಡಿಮೆಯಾಗಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡುವ ಬಗ್ಗೆ ಕೂಡ ಯೋಚಿಸಬಹುದು. ಈಗಾಗಲೇ ಕೇಂದ್ರ ಸರ್ಕಾರ ಪೆಟ್ರೋಲ್‌ಗೆ ₹19.8 ಮತ್ತು ಡೀಸೆಲ್‌ಗೆ ₹15.8 ಅಬಕಾರಿ ಸುಂಕ ವಿಧಿಸುತ್ತಿದೆ. ಕೇಂದ್ರ ಸರ್ಕಾರ ಈಗ ಅಬಕಾರಿ ಸುಂಕ ಒಂದು ರೂಪಾಯಿ ಹೆಚ್ಚಳ ಮಾಡಿದರೂ ವರ್ಷಕ್ಕೆ ಡೀಸೆಲ್‌ನಿಂದ ₹ 16,500 ಕೋಟಿ ಮತ್ತು ಪೆಟ್ರೋಲ್‌ನಿಂದ ₹ 5,600 ಕೋಟಿ ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆ ಇದ್ದು, ಬೆಲೆ ಕುಸಿತದ ಲಾಭವನ್ನು ಕೂಡ ಸರ್ಕಾರ ಪಡೆಯುವ ಸಾಧ್ಯತೆ ಇದೆ.












Click it and Unblock the Notifications