Veer Savarker Birth Anniversary: ವೀರ್ ಸಾವರ್ಕರ್ ಜನ್ಮದಿನದಂದೇ ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿಯ ಹಳೆಯ ಸಂಸತ್ ಭವನದ ಪಕ್ಕದಲ್ಲಿಯೇ ನಿರ್ಮಿಸಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28, ಭಾನುವಾರ) ಲೋಕಾರ್ಪಣೆಗೊಳಿಸಿದರು.
ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಜನ್ಮದಿನದಂದೇ ಹೊಸ ಸಂಸತ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿನೂತನವಾಗಿ ನಮನ ಸಲ್ಲಿಸಿದರು. ವೀರ್ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜನ್ಮದಿನ ಸ್ಮರಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ನಮಿಸಿದರು.

ಭಾನುವಾರ ಬೆಳಗ್ಗೆ ನೂತನ ಸಂಸತ್ ಭವನದಲ್ಲಿ ಗಣ ಹೋಮ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅನಂತರ ಶೃಂಗೇರಿ ಶಾರದಾ ಪೀಠದ ಪುರೋಹಿತರು ನಡೆಸಿದ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಸಂಸತ್ ಭವನ ನಿರ್ಮಾಣದಲ್ಲಿ ಭಾಗಿಯಾಗಿದ್ದ ಶ್ರಮಿಕರಿಗೆ ಸನ್ಮಾನ ಮಾಡಿದರು.
ಸರ್ವಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದಾಗ, ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಉಪಸ್ಥಿತರಿದ್ದರು. ಪೂಜಾ ಕೈಂಕರ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್ ಅನ್ನು ಹಸ್ತಾಂತರಿಸಲಾಯಿತು. ನಂತರ ಅದನ್ನು ಲೋಕಸಭೆ ಸ್ಪೀಕರ್ ಕೂರುವ ಜಾಗದ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಈ ಎಲ್ಲ ಕಾರ್ಯಕ್ರಮಗಳ ಬಳಿಕ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ ನೂತನ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾವರ್ಕರ್ ಅವರ ಫೋಟೋಗೆ ಪುಷ್ಟ ನಮನ ಸಲ್ಲಿಕೆ ಮಾಡಿದರು.
ವಿನಾಯಕ ದಾಮೋದರ್ ಸಾವರ್ಕರ್ ಅವರು 1883 ಮೇ 28ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗೂರು ಎಂಬಲ್ಲಿ ಜನಿಸಿದರು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜಕಾರಣಿ ಮತ್ತು ಬರಹಗಾರರಾಗಿ ವೀರ್ ಸಾವರ್ಕರ್ ಎಂದು ಭಾರತೀಯ ಇತಿಹಾಸದಲ್ಲಿ ದಾಖಲಾಗಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಪೂರ್ಣಗೊಂಡ ಬೆನ್ನಲ್ಲೇ ಆಧುನಿಕ ಶೈಲಿಯ ಸಂಸತ್ ಭವನ ನಿರ್ಮಿಸಿ, ಲೋಕಾರ್ಪಣೆ ಮಾಡಲಾಯಿತು. ನವಿಲು, ಕಮಲದ ಟಚ್ ಹೊಂದಿರುವ ಲೋಕಸಭೆ ಮತ್ತು ರಾಜ್ಯಸಭೆ ಸದನಗಳಲ್ಲಿ ಬೆಳಗ್ಗೆಯಿಂದಲೇ ಹಲವು ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಮುಂದಿನ ಮುಂಗಾರು ಅಧಿವೇಶನ ಇದೇ ಭವನದಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತ, ಜಗತ್ತಿನ ಅತಿ ಉತ್ತಮ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಸಂಸತ್ ಭವನವನ್ನು ಹೊಂದಿದ್ದರೂ, ಸಹ ಆ ಕಟ್ಟಡ ಬರೋಬ್ಬರಿ 96 ವರ್ಷಗಳ ಹಳೆಯದ್ದಾದ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.












Click it and Unblock the Notifications