ಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿ
ಭೋಪಾಲ್, ಅಕ್ಟೋಬರ್ 15 : ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿ ಉದ್ಯಮಿಗಳಿಗಷ್ಟೇ ಜಾಗವಿದೆ, ಬಡವರಿಗೆ, ಅಶಕ್ತರಿಗೆ ಜಾಗವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ನವೆಂಬರ್ 28ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿನ ದಾತಿಯಾದಲ್ಲಿ ಎಂಬಲ್ಲಿ ಪ್ರಚಾರ ಸಭೆಯೊಂದನ್ನುದ್ದೇಶಿಸಿ ಸೋಮವಾರ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು, ಅದೇ ಚರ್ವಿತಚರ್ವಣ ಭಾಷಣ ಮಾಡಿದರು!
ಭ್ರಷ್ಟಾಚಾರ, ಉದ್ಯಮಿಗಳ ಪಲಾಯನ, ರಫೇಲ್ ಡೀಲ್, ಬಡತನ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ವಿಷಯಗಳ ಕುರಿತು ರಾಹುಲ್ ಗಾಂಧಿ ಈ ಸಭೆಯಲ್ಲಿ ಮಾತನಾಡಿದರು. ನಂತರ ಅವರು ಡಬರಾ ಮತ್ತು ಗ್ವಾಲಿಯರ್ ನಲ್ಲಿ ಕೂಡ ಭಾಷಣ ಮಾಡಲಿದ್ದಾರೆ. ಅವರ ಭಾಷಣದ ಮುಖ್ಯಾಂಶ ಇಲ್ಲಿದೆ.
ಟ್ವಿಟ್ಟರ್ ನಲ್ಲಿ ಅವರು ಇಂದು ಬರೆದಿರುವ ಒಂದು ಚುಟುಕು ಕವನವನ್ನು ಕೂಡ ಈ ಸಂದರ್ಭದಲ್ಲಿ ಪ್ರಸ್ತಾಪಿಸಬಹುದು. ಅದೇನೆಂದರೆ, ಚೌಕಿದಾರರು ಭಾಷಣವನ್ನು ಸಖತ್ತಾಗಿ ಮಾಡಿದರು, ಹೊಟ್ಟೆಯ ಆಸನವನ್ನೇ ಮರೆತುಬಿಟ್ಟರು ; ಯೋಗ ಭೋಗ ಎಲ್ಲವನ್ನೂ ಚೆನ್ನಾಗಿಯೇ ಮಾಡಿದರೆ, ಜನರ ರೇಶನ್ ಅನ್ನೇ ಮರೆತುಬಿಟ್ಟರು.

ಮೋದಿ ಹೃದಯಲ್ಲಿ ಬಡವರಿಗೆ ಜಾಗವಿಲ್ಲ!
ಮೋದಿ ಹೃದಯದಲ್ಲಿ ಉದ್ಯಮಿಗಳಿಗಷ್ಟೇ ಜಾಗ. ಅಲ್ಲಿ ಬಡವರಿಗೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ, ಅಶಕ್ತರಿಗೆ ಜಾಗವಿಲ್ಲ. ಅವರ ಹೃದಯದಲ್ಲಿ ಉದ್ಯಮಿ 'ಭಾಯಿ'ಗಳಿಗೆ ಮಾತ್ರವೇ ಜಾಗವಿದೆ. ಮೆಹುಲ್ ಭಾಯಿ, ನೀರವ್ ಭಾಯಿ, ಅನಿಲ್ ಭಾಯಿ, ಲಲಿತ್ ಭಾಯಿ.... ಆರದೆ ಮೋದೀಜಿ ಎಂದಾದರೂ ಬಡವರಿಗೆ ಭಾಯಿ ಎಂದು ಕರೆದಿದ್ದನ್ನು ಕೇಳಿದ್ದೀರಾ? ಸೂಟು ಬೂಟಿನಲ್ಲಿಲ್ಲದವರು ಮೋದಿಯವರಿಗೆ ಎಂದಿಗೂ 'ಭಾಯಿ'ಯಲ್ಲ ಎಂದು ರಾಹುಲ್ ವ್ಯಂಗ್ಯವಾಗಿ ಹೇಳಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ
ಪ್ರಧಾನಿ ನರೇಂದ್ರ ಮೋದಿಯವರು ಒಂದೆಡೆ ಬೇಟಿ ಬಚಾವೋ, ಬೇಟಿ ಪಢಾವೋ ಅನ್ನುತ್ತಾರೆ. ಆದರೆ ಅವರದೇ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೇನ್ಗಾರ್ ಅವರ ಮೇಲೆ ಅತ್ಯಚಾರದ ಆರೋಪವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಈ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ. ಈ ಘೋಷಣೆಯನ್ನೇ ಬದಲಿಸಬೇಕಿದೆ. ಬೇಟಿ ಪಢಾವೋ ಔರ್ ಬೇಟಿ ಕೋ ಬಿಜೆಪಿ ಕೆ ಎಂಎಲ್ ಎ ಸೆ ಬಚಾವೋ ಎಂದು ಬದಲಿಸಬೇಕು ಎಂದು ಅವರು ಕುಟುಕಿದರು.

ಒಂದೇ ಒಂದು ಬಾರಿ ಪ್ರಧಾನಿ ಕಚೇರಿಗೆ ಹೋಗಿದ್ದೆ
"ನಾನು ಒಂದೇ ಒಂದು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದೆ. ಆಗ ನಾನು ರೈತರ ಬಗ್ಗೆ ಮಾತನಾಡಿದ್ದೆ. ರೈತರ ಸಾಲ ಮನ್ನಾಮಾಡುವ ಬಗ್ಗೆ ನಾನು ಅವರಲ್ಲಿ ಮನವಿ ಮಾಡಿದ್ದೆ. ನೀವು ಕೇವಲ ಶ್ರೀಮಂತರ ಸಾಲವನ್ನಷ್ಟೇ ಮನ್ನಾ ಮಾಡುತ್ತಿದ್ದೀರಿ, ಬಡವರ ಸಾಲವನ್ನೂ ಮನ್ನಾ ಮಾಡಿ ಎಂದು ಕೇಳಿದ್ದೆ. ಆದರೆ ಅವರು ಮಾತ್ರ ಒಂದೇ ಒಂದು ಶಬ್ದವನ್ನೂ ಮಾತನಾಡಲಿಲ್ಲ" ಎಂದರು.

ಮಧ್ಯಪ್ರದೇಶದಲ್ಲಿ ಚುನಾವಣೆ ಯಾವತ್ತು?
230 ಕ್ಷೇತ್ರಗಳ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ಕೆಲವು ಸಮೀಕ್ಶಃಸೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೆ, ಬಿಎಸ್ಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೇ ಇರುವುದರಿಂಡ ಬಿಜೆಪಿ ಲಾಭ ಪಡೆಯಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಒಟ್ಟಿನಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.












Click it and Unblock the Notifications