ಪೆಟ್ರೋಲ್ ದರದಲ್ಲಿ ಮತ್ತೆ ಅಲ್ಪಪ್ರಮಾಣದ ಏರಿಕೆ!
ಬೆಂಗಳೂರು, ಸೆ. 16: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರವನ್ನು ಅಲ್ಪಪ್ರಮಾಣದಲ್ಲಿ ಏರಿಕೆ ಮಾಡಿವೆ. ಇದೇ ವೇಳೆ ಡೀಸೆಲ್ ದರದಲ್ಲಿ ಕೊಂಚ ಬದಲಾವಣೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 58 ಪೈಸೆ ಏರಿಕೆಯಾಗಲಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 31 ಪೈಸೆ ಇಳಿಕೆಯಾಗಿದೆ.
ಆಗಸ್ಟ್ 31ರಂದು ಪೆಟ್ರೋಲ್ ಪ್ರತಿ ಲೀಟರ್ ಗೆ 3.38 ರು. ಹಾಗೂ ಡೀಸೆಲ್ ಪ್ರತಿ ಲೀಟರ್ 2.67 ರು. ಏರಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆಗಸ್ಟ್ 15 ರಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಕಡಿತ ಮಾಡಲಾಗಿತ್ತು. ಲೀಟರ್ ಪೆಟ್ರೋಲ್ ಗೆ ಒಂದು ರು. ಕಡಿತ ಮಾಡಿದ್ದರೆ, ಡಿಸೇಲ್ ದರವನ್ನು 2 ರು. ಕಡಿಮೆ ಮಾಡಲಾಗಿತ್ತು.

ನೂತನ ದರದಂತೆ ದೆಹಲಿಯಲ್ಲಿ ಗ್ರಾಹಕರು 64.21 ಪ್ರತಿ ಲೀಟರ್ ಪೆಟ್ರೋಲ್ ಗೆ ಹಾಗೂ 52.59 ರು ಪ್ರತಿ ಲೀಟರ್ ಡೀಸೆಲ್ ಗೆ ತೆರಬೇಕಾಗುತ್ತದೆ. [ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]
ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಡಾಲರ್ ಎದುರು ರುಪಾಯಿ ದರ ಗುರುವಾರ 67.02 ರು ನಂತೆ ಇತ್ತು. (ಒನ್ ಇಂಡಿಯಾ ಸುದ್ದಿ)












Click it and Unblock the Notifications