ದೈನಂದಿನ ಪರಿಷ್ಕರಣೆ: ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ
ನವದೆಹಲಿ, ಜೂನ್ 25: ದೈನಂದಿನ ಪರಿಷ್ಕರಣೆಯಂತೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಮಾಡಲಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.77 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 88 ಪೈಸೆ ಇಳಿಕೆ ಮಾಡಲಾಗಿದೆ.
ಕಳೆದ ವಾರದಿಂದ ದೈನಂದಿನ ಇಂಧನ ದರ ಪರಿಷ್ಕರಣೆ ಜಾರಿಗೆ ಬಂದಿದೆ. ಕಳೆದ 15 ವರ್ಷಗಳಿಂದ ಇದ್ದ ವ್ಯವಸ್ಥೆಯಾದ ತಿಂಗಳ ಮೊದಲ ದಿನ 16ನೇ ದಿನ ದರ ಪರಿಷ್ಕರಣೆಯನ್ನು ಬದಿಗೊತ್ತಿ ಪ್ರತಿದಿನ ದರ ಪರಿಷ್ಕರಣೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇತ್ತೀಚೆಗೆ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೂನ್ 16ರಂದು ದೆಹಲಿಯಲ್ಲಿ ಪೆಟ್ರೋಲ್ ದರ 65.48ರು ಪ್ರತಿ ಲೀಟರ್ ನಂತೆ ಇತ್ತು. ಈಗ 63.71 ರು ಪ್ರತಿ ಲೀಟರ್ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 68.03 ಪ್ರತಿ ಲೀಟರ್ ಗಿದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 57.19ರು ನಂತೆ ಇದೆ.
ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನ ಬೆಳಗ್ಗೆ 6ಗಂಟೆಗೆ ವ್ಯತ್ಯಾಸ ಕಾಣಲಿದೆ. ಮೇ 1ರಿಂದ ಪುದುಚೇರಿ, ಚಂಡೀಗಢ, ಜೆಮ್ಷೆಡ್ ಪುರ, ಉದಯ್ ಪುರ ಹಾಗೂ ವಿಶಾಖಪಟ್ಟಣಂನಲ್ಲಿ ಈ ಹೊಸ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾಗಿದ್ದು ಜೂ. 16ರಿಂದ ದೇಶಾದ್ಯಂತ ಜಾರಿಗೊಳಿಸಲಾಗಿದೆ.












Click it and Unblock the Notifications