ವಿಚಿತ್ರ ತಿರುವು ಪಡೆದ ಬಾಲಕಿಗೆ ಪಪೋನ್ ಕಿಸ್ ಪ್ರಕರಣ
ನವದೆಹಲಿ, ಫೆಬ್ರವರಿ 23 : ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋಗೆ ಸಿದ್ಧವಾಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಯಕ ಪರೋನ್ ಚುಂಬಿಸಿದ ಪ್ರಕರಣ ಇದ್ದಕ್ಕಿದ್ದಂತೆ ವಿಚಿತ್ರ ತಿರುವು ಪಡೆದಿದ್ದು, 'ಅಂಥದ್ದೇನೂ' ನಡೆದೇ ಇಲ್ಲ ಎಂದು ಬಾಲಕಿಯೇ ಹೇಳಿಕೆ ನೀಡಿದ್ದಾಳೆ.
ಈ ಕುರಿತಾಗಿ ವಿಡಿಯೋವೊಂದನ್ನು ಆಸ್ಸಾಂನಲ್ಲಿರುವ ಬಾಲಕಿಯ ಪೋಷಕರು, ಬಂಧುಗಳು ಬಿಡುಗಡೆ ಮಾಡಿದ್ದು, ಅದರಲ್ಲಿ ಬಾಲಕಿಯ ತಂದೆ ತಾಯಿ ಮತ್ತಿತರರು ಮಾತನಾಡಿದ್ದು, ಈ ಪ್ರಕರಣಕ್ಕೆ ಇಲ್ಲದ ವಿವಾದದ ಕಿಡಿ ಇಡಬೇಡಿ ಎಂದು ಬೇಡಿಕೊಂಡಿದ್ದಾರೆ.
ಆಗಿದ್ದೇನೆಂದರೆ, ತನ್ನ ಪರ್ಫಾರ್ಮನ್ಸ್ ಗಾಗಿ ಬಾಲಕಿ ಸಿದ್ಧಳಾಗುತ್ತಿದ್ದ ಸಮಯದಲ್ಲಿ, ಆಕೆಗೆ ಸಹಾಯ ಮಾಡುತ್ತಿದ್ದ ಗಾಯಕ ಪಪೋನ್ ಮುತ್ತಿಡುತ್ತಿರುವಂಥ ವಿಡಿಯೋ ಭಾರೀ ವೈರಲ್ ಆಗಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅವರು ಮುತ್ತಿಟ್ಟಿದ್ದು ನಿಜ ಕೂಡ.

ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಬಾಲಕಿ, "ಪಪೋನ್ ಅವರು ತನ್ನ ಮಗಳಿಗೆ ಮುತ್ತು ಕೊಡುವಂತೆ ನನಗೂ ಕೊಟ್ಟಿದ್ದಾರೆ. ನನ್ನ ತಾಯಿ ಮತ್ತು ನನ್ನ ತಂದೆ ಇದೇ ರೀತಿ ಪ್ರೀತಿಯಿಂದ ಮುತ್ತಿಡುತ್ತಿರುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ" ಎಂದು ಅಮಾಯಕವಾಗಿ ಹೇಳಿಕೆ ನೀಡಿದ್ದಾಳೆ.
"ಗಾಯಕ ಪಪೋನ್ ನನ್ನ ಮಗಳಿಗೆ ತಂದೆಯಿಂದ್ದಂತೆ. ಆಕೆಯ ಕನಸು ನನಸಾಗಲೆಂದು ಅವರು ಕೂಡ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಇದೇ ರೀತಿ ಕನಸು ಕಂಡಿರುವ ಇತರ ಮಕ್ಕಳಿಗೂ ಅವರೇ ಇದೇ ರೀತಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ನೀಡಿದ ಮುತ್ತಿನಲ್ಲಿ ಅದೇ ವಾತ್ಸಲ್ಯವಿದೆ. ದಯವಿಟ್ಟು ಇದನ್ನು ವಿವಾದ ಮಾಡಬೇಡಿ" ಎಂದು ಬಾಲಕಿಯ ತಂದೆ ವಿನಂತಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ವಕೀಲೆ ರುನಾ ಭುಯಾನ್ ಎಂಬುವವರು ರಾಷ್ಟ್ರೀಯ ಮಕ್ಕಳ ರಕ್ಷಣಾ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಗಾಯಕನ ಮೇಲೆ ಕ್ರಮ ಜರುಗಿಸಬೇಕು ಎಂದು ದೂರನ್ನೂ ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪಪೋನ್ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ.
ಈ ನಡುವೆ, ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವಿದ್ಯಾ ಠಾಕೂರ್ ಅವರು, ಈ ಪ್ರಕರಣದ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಗುವಾಹಾತಿ ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಪೋನ್ ಮೇಲೆ ಕ್ರಮ ಜರುಗಿಸುವ ಸಾಧ್ಯತೆಗಳಿವೆ.
ಈ ಎಲ್ಲ ಬೆಳವಣಿಗೆಯಿಂದ ತೀವ್ರ ವಿಚಲಿತರಾಗಿರುವ ಗಾಯಕ ಪಪೋನ್ ಮಹಾಂತ ಅವರು, ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋನಿಂದ ಕೆಳಗಿಳಿಯುವುದಾಗಿ ಹೇಳಿಕೆ ನೀಡಿದ್ದಾರೆ. ನಾನು ಮಾನಸಿಕವಾಗಿ ನೊಂದಿದ್ದು, ತೀರ್ಪುಗಾರನಾಗಿ ನ್ಯಾಯ ಒದಗಿಸುವ ಸ್ಥಿತಿಯಲ್ಲಿ ನಾನಿಲ್ಲ. ಭಾರತೀಯ ನ್ಯಾಯಾಂಗದ ಮೇಲೆ ನನಗೆ ಭರವಸೆಯಿದೆ. ಕಳಂಕರಹಿತನಾಗಿ ಹೊರಬರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications